Slide
Slide
Slide
previous arrow
next arrow

ಸೇವಾ ನಿವೃತ್ತಿ‌ ಹೊಂದಿದ RGSS ಮುಖ್ಯಕಾರ್ಯನಿರ್ವಾಹಕ ‘ಎಸ್.ಎನ್ ಹೆಗಡೆ’

300x250 AD

ಅಂಕೋಲಾ: ತಾಲೂಕಿನ ಅತ್ಯಂತ ಹಳೆಯ ಸಹಕಾರಿ ಸಂಘಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ ಕಳೆದ 36 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಪ್ರಮುಖ ಕಾರಣೀಭೂತರಾದ ಮುಖ್ಯ ಕಾರ್ಯನಿರ್ವಾಹಕ ಎಸ್.ಎನ್. ಹೆಗಡೆ ಇದೀಗ ಸೇವಾ ನಿವೃತ್ತಿಯನ್ನು ಹೊಂದಿದ್ದಾರೆ.

ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳವಳ್ಳಿಯ ಮೂಲದ ಸುಬ್ರಾಯ ನಾರಾಯಣ ಹೆಗಡೆ, ತಂದೆ ನಾರಾಯಣ ಹೆಗಡೆ ಹಾಗೂ ತಾಯಿ ಗಣಪಿ ಹೆಗಡೆ ಅವರ ಪುತ್ರ. ಕಾರವಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು, 1988ರಲ್ಲಿ ರಾಮನಗುಳಿ ಸಹಕಾರಿ ಸಂಘದಲ್ಲಿ ಗುಮಾಸ್ತ ಹುದ್ದೆಗೆ ನೇಮಕಗೊಂಡು ತಮ್ಮ ವೃತ್ತಿ ಜೀವನಕ್ಕೆ ಕಾಲಿಟ್ಟರು. ಸುಮಾರು 9 ವರ್ಷಗಳ ಕಾಲ ಗುಮಾಸ್ತನಾಗಿ ಹಾಗೂ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ, 1997ರಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಪದೋನ್ನತಿ ಹೊಂದಿದರು. ಪ್ರಾಮಾಣಿಕತೆ, ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದ ಅವರು, 27 ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ, ಒಟ್ಟು 36 ವರ್ಷಗಳ ಕಾಲ ಸಂಘದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ‌.

ಅವರ ಸೇವೆಯ ಅವಧಿಯಲ್ಲಿ ಸಂಘವು ಹಲವು ಪ್ರಶಸ್ತಿಗಳು ಮತ್ತು ಪುರಸ್ಕಾರಗಳಿಗೆ ಪಾತ್ರವಾಯಿತು. 2018ರಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ ಯನ್ನು ಪಡೆದಿರುವುದು ಇವರ ಸಾಧನೆಯ ಮಹತ್ವದ ಮೈಲಿಗಲ್ಲು. ಇವರ ನೇತೃತ್ವದಲ್ಲಿ 1998-99, 2001-2002, 2011-12 ಮತ್ತು 2020-21ರಲ್ಲಿ ಸಂಘವು ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನೀಡುವ ‘ಉತ್ತಮ ಸಹಕಾರಿ ಸಂಘ’ ಪ್ರಶಸ್ತಿಗೆ ಭಾಜನವಾಯಿತು. 2011-12 ರಲ್ಲಿ, 2012-13 ರಲ್ಲಿ, 2013-14 ರಲ್ಲಿ ಕರ್ನಾಟಕ ರಾಜ್ಯ ಅಪೆಕ್ಸ್ ಪ್ರಶಸ್ತಿ ಪಡೆಯುವಲ್ಲಿ ಇವರ ಪಾತ್ರ ಬಹುಮುಖ್ಯ.

ಇವರ ಅವಧಿಯಲ್ಲಿ, ಹಳವಳ್ಳಿಯಲ್ಲಿ ಸಂಘದ ಮೊದಲ ಶಾಖೆಯ ನೂತನ ಕಟ್ಟಡವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು , ರಾಮನಗುಳಿಯಲ್ಲಿ ಮಲ್ಟಿ ಸರ್ವೀಸ್ ಸೆಂಟರ್, ಹಿಟ್ಟಿನ ಗಿರಣಿ, ಮತ್ತು ಕೊಬ್ಬರಿ ಎಣ್ಣೆ ಗಾಣ ಮುಂತಾದವುಗಳಿಂದ, ಸಂಘದ ಸೇವೆಯನ್ನು ಇನ್ನಷ್ಟು ವಿಸ್ತರಿಸಿದರು.

ಸಂಘವು ಮುಂದಿನ ವರ್ಷ 75 ನೇ ವರ್ಷದ ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ‌. ಕಳೆದ 7 ವರ್ಷಗಳ ಅಡಿಟ್ ನಲ್ಲಿ ಸಂಘವು ನಿರಂತರವಾಗಿ “ಎ” ಗ್ರೇಡ್ ಪಡೆದುಕೊಂಡಿರುವುದು ಸಂಘದ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ. ಸಂಘವು 1997-98 ರಲ್ಲಿ 693 ಸದಸ್ಯರುಗಳನ್ನು ಒಳಗೊಂಡು 63.72 ಲಕ್ಷ ದುಡಿಯುವ ಬಂಡವಾಳ ಹೊಂದಿತ್ತು. ಇದೀಗ 2023-24 ನೇ ಸಾಲಿನಲ್ಲಿ 2107 ಸದಸ್ಯರುಗಳನ್ನು ಒಳಗೊಂಡು 49 ಕೋಟಿ 11ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿದೆ‌. ಎಸ್.ಎನ್ ಹೆಗಡೆ ಅವರ ಕಾಲಾವಧಿಯಲ್ಲಿ ಸಂಘವು ಅತ್ಯಂತ ಎತ್ತರಕ್ಕೆ ಬೆಳೆದು, ಗಟ್ಟಿ ಆಲದ ಮರವಾಗಿ ಬೆಳೆದು ನಿಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಎಸ್ ಎನ್ ಹೆಗಡೆ ಅವರು ಜುಲೈ 31ಕ್ಕೆ ನಿವೃತ್ತರಾಗಿದ್ದರು ಕೂಡ ಸಂಘದ ಆಡಳಿತ ಮಂಡಳಿಯು ಅವರ ಸಲಹೆ-ಸೂಚನೆ ಸಂಘದ ಹಿತದೃಷ್ಟಿಯಿಂದ ಅವಶ್ಯಕ ಎಂದು ತಿಳಿದು 3 ತಿಂಗಳ ಕಾಲ ವಿಶೇಷ ಲೆಕ್ಕ ತಪಾಸಕರಾಗಿ ಅವರನ್ನು ನೇಮಿಸಿದೆ‌.

300x250 AD

Box

ಸಂಘದ ಸದಸ್ಯರ ಬೇಡಿಕೆಗೆ ಸ್ಪಂದಿಸಿ, ಸಂಘದಿಂದ ಸಹಾಯ ಮಾಡಿದ ತೃಪ್ತಿ ನನಗಿದೆ. ಸಂಘವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಸಹಕರಿಸಿ ನನ್ನೊಂದಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ನನ್ನೆಲ್ಲಾ ಸಿಬ್ಬಂದಿಗಳಿಗೂ ಕೃತಜ್ಞತೆ ಸಲ್ಲಿಸುವೆ. ಸಂಘದ ಬೆಳವಣಿಗೆಯಲ್ಲಿ ನನ್ನದು ಚಿಕ್ಕ ಅಳಿಲು ಸೇವೆ ಇದೆ ಎಂಬ ಹೆಮ್ಮೆ ಇದೆ.

ಎಸ್.ಎನ್. ಹೆಗಡೆ
ನಿವೃತ್ತ ಮುಖ್ಯಕಾರ್ಯನಿರ್ವಾಹಕರು
ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ,
ಅಂಕೋಲಾ, ಉತ್ತರ ಕನ್ನಡ

Share This
300x250 AD
300x250 AD
300x250 AD
Back to top