ಮುಂಡಗೋಡ: ಗ್ರಾಮೀಣ ಭಾಗದ ಜಲ ಮೂಲ ಸೇರುವ ಬೂದು ನೀರಿನ ಸಮರ್ಪಕ ನಿರ್ವಹಣೆ, ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಹಾಗೂ ನರೇಗಾದಡಿ ಲಭ್ಯವಿರುವ ವಿವಿಧ ಕಾಮಗಾರಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಳ್ಳಿ ಗ್ರಾಮದಲ್ಲಿ ತಾಲ್ಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಹಾಗೂ ಬಿಎಫ್ಟಿ ಗಣಪತಿ ಪವಾರ ಶುಕ್ರವಾರ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ವಿಶೇಷ ಅಭಿಯಾನ ಮತ್ತು ರೋಜಗಾರ ದಿವಸ ಆಚರಣೆ ನಡೆಸಿ, ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಗ್ರಾಮೀಣ ಪ್ರದೇಶದ ನೀರಿನ ಮೂಲಗಳನ್ನು ಬೂದು ನೀರು ಸೇರ್ಪಡೆ ಪ್ರಕ್ರಿಯೆಯಿಂದ ಮುಕ್ತಗೊಳಿಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಪ್ರಥಮ ಹಂತದಲ್ಲಿ 2024-25 ನೇ ಸಾಲಿನಲ್ಲಿ ಸರ್ಕಾರ ರಾಜ್ಯಾಧ್ಯಂತ ಒಟ್ಟು 500 ಬೂದು ನೀರು ನಿರ್ವಾಹಕ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದೆ. ಆದ್ದರಿಂದ ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಬೂದು ನೀರನ್ನು ಜಲ ಮೂಲಗಳಿಗೆ ಬಿಡದೇ ಪ್ರತ್ಯೇಕವಾಗಿ ಇಂಗು ಗುಂಡಿ ನಿರ್ಮಿಸಿಕೊಂಡು ಅಲ್ಲಿ ಬಿಡಬೇಕು. ಈ ನಿಟ್ಟಿನಲ್ಲಿ ಅಕ್ಟೋಬರ್ 2ರ ವರೆಗೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ ವಿಶೇಷ ಅಭಿಯಾನ ನಡೆಸಿ ಜನರಿಗೆ ಬೂದು ನಿರ್ವಹಣೆ, ವಿಲೇವಾರಿ ಕುರಿತು ಅರಿವು ಮೂಡಿಸಲು ತಿಳಿಸಲಾಗಿದ್ದು, ಅದರ ಭಾಗವಾಗಿ ಈ ಕಾರ್ಯಕ್ರಮ ಜರುಗಿಸಲಾಗಿದೆ ಎಂದು ತಾಲ್ಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗಣಪತಿ ಬಾಳಮ್ಮನವರ, ಬಿಎಫ್ಟಿ ಗಣಪತಿ ಪವಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.