ನಾಗಮಂಗಲದಲ್ಲಿ ಹಿಂದೂಗಳಿಗೆ ಒಂದು ರೀತಿ: ಮುಸಲ್ಮಾನರಿಗೆ ಇನ್ನೊಂದು ನೀತಿ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರಶ್ನಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚಿಸುತ್ತಿದೆ ಎಂದು ಪ್ರಸ್ತಾಪಿಸಿದರು. ಕರ್ನಾಟಕದಲ್ಲಿ ಸಂವಿಧಾನವನ್ನು ಜಾರಿ ಮಾಡುತ್ತಿದ್ದೀರಾ? ಎಂದು ಕೇಳಿದರು.
ಜಾತ್ಯತೀತ, ಪ್ರಜಾಪ್ರಭುತ್ವವಾದಿ, ಸಂವಿಧಾನ ಯಥಾವತ್ ಜಾರಿಗೊಳಿಸುವ ಸರಕಾರ ಎಂದು ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಅಟ್ರಾಸಿಟಿ ಕೇಸ್ ಆಗಿದ್ದು, ಬಂಧಿಸಿದ್ದೀರ. ಆದರೆ, ಒಂದು ತಿಂಗಳಿಗೂ ಹಿಂದೆ ಇದೇ ಅಟ್ರಾಸಿಟಿ ಕೇಸ್ ಕಾಂಗ್ರೆಸ್ಸಿನ ಶಾಸಕ ಚನ್ನಾರೆಡ್ಡಿ ಮೇಲೂ ಆಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ರಾಜಾರೋಷವಾಗಿ ಭಾಗವಹಿಸುವ ಅವರನ್ನು ಇನ್ನೂ ಬಂಧಿಸಿಲ್ಲ. ಇದಾ ನಿಮ್ಮ ಪ್ರಜಾಪ್ರಭುತ್ವ? ಇದಾ ನಿಮ್ಮ ಸೆಕ್ಯುಲರಿಸಂ, ಇದಾ ನಿಮ್ಮ ಸಂವಿಧಾನ ಮಾನ್ಯ ಸಿದ್ದರಾಮಯ್ಯನವರೇ ಎಂದು ಕೇಳಿದರು.
ನಾಗಮಂಗಲದಲ್ಲಿ ಗಣಪತಿ ಹಬ್ಬ ಮಾಡುವ, ಮೆರವಣಿಗೆ ಹೋಗುವ ಹಿಂದೂ ಯುವಕರ ಮೇಲೆ ನೂರಾರು ಕಲ್ಲು ಎಸೆದುದಲ್ಲದೆ, ಗಣಪತಿ ಮೂರ್ತಿ ಮೇಲೆ ಚಪ್ಪಲಿ ಎಸೆದಿದ್ದಾರೆ. ಹಿಂದೂಗಳ ಮೇಲೆ ಲಾಠಿಚಾರ್ಜ್, ಕಲ್ಲೆಸೆತ ಆಗಿದೆ. ಹಿಂದೂಗಳ ಹತ್ತಾರು ಅಂಗಡಿ ಸುಟ್ಟಿದ್ದಾರೆ. ಆದರೆ, ಹಿಂದೂಗಳ ಮೇಲೇ ಪ್ರಮುಖ ಆರೋಪಿಗಳನ್ನಾಗಿ ಮಾಡಿ (ಎ1, ಎ2, ಎ3 ಹೀಗೆ) ಕೇಸು ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಅಂಗಡಿ ಸುಟ್ಟವರು, ಚಪ್ಪಲಿ, ಕಲ್ಲು ಎಸೆದವರನ್ನು ಕೇಸಿನಲ್ಲಿ ಸೇರಿಸಿಲ್ಲ. ಇದು ರಾಜ್ಯದ ಪ್ರಜಾಪ್ರಭುತ್ವವೇ ಎಂದು ಕೇಳಿದರು. ಹಿಂದೂಗಳಿಗೆ ಒಂದು ರೀತಿ, ಮುಸಲ್ಮಾನರಿಗೆ ಇನ್ನೊಂದು ನೀತಿ- ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ಟೀಕಿಸಿದರು.
ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದರು,ಸಚಿವ ಮಹದೇವಪ್ಪ ಭಾಷಣ ಮಾಡುತ್ತಿದ್ದರು. ಒಬ್ಬ ಯುವಕ ಕಾಂಪೌಂಡ್ ಜಿಗಿದು ವಿವಿಐಪಿ ಗ್ಯಾಲರಿ ದಾಟಿ ವೇದಿಕೆ ಏರುತ್ತಿದ್ದಾನೆ. ಎಲ್ಲರೂ ಗಾಬರಿಗೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ, ಸಚಿವರು, ವಿಧಾನಸೌಧಕ್ಕೆ ಸೆಕ್ಯೂರಿಟಿ ಇಲ್ಲ. ಸಂಪೂರ್ಣ ಭದ್ರತಾ ವೈಫಲ್ಯ ಆಗಿದೆ ಎಂದು ಗಮನ ಸೆಳೆದರು. ಗೂಢಚರ ಇಲಾಖೆ, ಗೃಹ ಇಲಾಖೆ, ಪೊಲೀಸ್ ಇಲಾಖೆ ಕರ್ನಾಟಕದಲ್ಲಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಅದೇ ವಿಧಾನಸೌಧದಲ್ಲಿ ಸದನ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದರು. ರಾಮೇಶ್ವರಂ ಕೆಫೆ ಸ್ಪೋಟ ಸಂಭವಿಸಿದೆ. ಈ ಆರೋಪಿಗಳು ಬಿಜೆಪಿ ಕಚೇರಿಯನ್ನು ಗುರಿಯನ್ನಾಗಿ ಮಾಡಿದ್ದರು ಎಂದು ಎನ್‍ಐಎ ವರದಿ ಹೇಳಿದೆ. ಈ ಸರಕಾರವು ಕರ್ನಾಟಕ ರಾಜ್ಯದಲ್ಲಿ ಗೃಹ ಇಲಾಖೆಯನ್ನು ಸಂಪೂರ್ಣವಾಗಿ ಅಲ್ಪಸಂಖ್ಯಾತರ ಕೈಗೆ ಕೊಟ್ಟಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಯವರು ಮೀಸಲಾತಿ ವಿರೋಧಿಸಿ ಡಾ. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆ ಬಗ್ಗೆ ಸಿದ್ದರಾಮಯ್ಯನವರು ಏನು ಹೇಳುತ್ತಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.