ಶಿರಸಿ: ನಗರದ ರಾಗಮಿತ್ರ ಪ್ರತಿಷ್ಠಾನ ಹಾಗೂ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಹಯೋಗದಲ್ಲಿ ಕಳೆದ ಒಂದು ವರ್ಷಗಳ ಕಾಲ ಪ್ರತಿ ತಿಂಗಳದ ಮೊದಲ ಸೋಮವಾರ ನಿರಂತರವಾಗಿ ಸ್ವರ್ಣವಲ್ಲೀ ಶ್ರೀಗಳ ಪೀಠಾರೋಹಣ 33ನೇ ವರ್ಷದ ಅಂಗವಾಗಿ ನಡೆಸಿಕೊಂಡು ಬರುತ್ತಿರುವ ಗುರು ಅರ್ಪಣೆ-ಕಲಾನುಬಂಧ ಸಂಗೀತ ಕಾರ್ಯಕ್ರಮದ ಮಹಾಸಮರ್ಪಣೆ ಸೆ.17 ರಂದು ಶ್ರೀಮಠದ ಸುಧರ್ಮಾ ಸಭಾಭವನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 9.30 ರಿಂದ ಆರಂಭಗೊಳ್ಳುವ ಸಂಗೀತ ಕಾರ್ಯಕ್ರಮ ರಾತ್ರಿ 8ಗಂಟೆಯವರೆಗೆ ನಡೆಯಲಿದ್ದು, ಗುರು ಅರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಎನ್.ಭಟ್ಟ ಸುಗಾವಿ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ನಡೆಯುವ ಗಾಯನದಲ್ಲಿ ಮಾಬ್ಲೇಶ್ವರ ಹೆಗ್ಗಾರ್, ಹರೀಶ ಹೆಗಡೆ ಹಲವಳ್ಳಿ, ಕುಮಾರಿ ತೇಜಸ್ವಿನಿ ವೆರ್ಣೇಕರ ವಾರಣಾಸಿ, ಡಾ.ಕೆ.ಜಿ.ಭಟ್ಟ ಮತ್ತು ಡಾ.ಅಶೋಕ ಹುಗ್ಗಣ್ಣನವರ್ ತಮ್ಮ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 4 ಘಂಟೆಯಿಂದ 5 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ನಂತರ 5.30 ರಿಂದ 7 ಘಂಟೆಯವರೆಗೆ ಬಾನ್ಸೂರಿ ವಾದಕ ದೀಪಕ ಹೆಬ್ಬಾರ್ ಹಾಗೂ ರಾಗಮಿತ್ರ ಪ್ರತಿಷ್ಠಾನದ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಇವರಿಂದ ಕೊಳಲು ಹಾಗೂ ಹಾರ್ಮೋನಿಯಂ ವಾದನದ ಜುಗಲ್ ಬಂಧಿ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಕುಮಾರಿ ಅಮೃತಾ ಅರುಣ ಪೈ ಶಿರಸಿ ಇವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಮೇಲಿನ ಎಲ್ಲ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ಭರತ ಹೆಗಡೆ, ಮಹೇಶ ಭಟ್ಟ ಕಲ್ಲಳ್ಳಿ ಸಹಕಾರ ನೀಡಲಿದ್ದು, ತಬಲಾದಲ್ಲಿ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಅಲ್ಲಮಪ್ರಭು ಕಡಕೋಡ, ಎಂ.ಜಿ..ಭಟ್ಟ ನೆಬ್ಬೂರ, ಗಣೇಶ ಗುಂಟ್ಕಲ್, ಗುರುರಾಜ ಆಡುಕಳ ಮತ್ತು ಕಿರಣ ಹೆಗಡೆ ಕಾನಗೋಡ ಸಾಥ್ ನೀಡಲಿದ್ದಾರೆ. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಕೃಪಾಶೀರ್ವಾದಕ್ಕೆ ಹಾಗೂ ಮಹಾ ಸಮರ್ಪಣೆ ಸಂಗೀತವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕ ವಿ.ಪ್ರಕಾಶ ಹೆಗಡೆ ಯಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.