ಜೋಯಿಡಾ: ಕಾರು ಮಾರಾಟ ಮಾಡುವುದಾಗಿ ಹೇಳಿ ರೂ:1,90,000/- ಹಣವನ್ನು ಎಗರಿಸಿಕೊಂಡು ಪರಾರಿಯಾಗಿ ಜೋಯಿಡಾ ತಾಲೂಕಿನ ರಾಮನಗರದ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ನಡೆದಿರುವುದರ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ರಾಮನಗರದ ನಿವಾಸಿ ಬಾಬಲಿ ಚಾಂಬಾರ ಎಂಬವರೇ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಾರು ಮಾರಾಟದ ನೆಪದಲ್ಲಿ ವಂಚಿಸಿದ ದಾಂಡೇಲಿಯ ವನಶ್ರೀ ನಗರದ ಅಭಿಷೇಕ ಜಯರಾಮ ಮಾಜಾಳಕರ, ದಾಂಡೇಲಿಯ ವಿನಾಯಕ ಹಾಗೂ ರಾಮನಗರದ ಸೋನಾಲಿ ವಿರುದ್ಧ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಖರೀದಿಸುವ ಉದ್ದೇಶದಿಂದ ಬಾಬಲಿ ಚಾಂಬಾರ ಅವರು ಶಂಕಿತರಿಗೆ ಮುಂಗಡ ಹಣವನ್ನು ಪಾವತಿಸಿದ ನಂತರ ಮರುದಿನ ಅವರನ್ನು ಸಂಪರ್ಕಿಸಿದಾಗ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ತಾನು ಮೋಸ ಹೋಗಿರುವುದಾಗಿ ತಿಳಿದು ಬಾಬಲಿ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾಮನಗರದ ಬಾಬಲಿ ಚಾಂಬಾರ ಅವರು ತಮ್ಮ ಮಾಲೀಕತ್ವದ ಕಾರು ಆಗಾಗ ರಿಪೇರಿಗೆ ಬರುತ್ತಿದ್ದರಿಂದ ಮತ್ತೊಂದು ಹಳೆಯ ಕಾರು ಖರೀದಿಸಲು ಮುಂದಾಗಿದ್ದರು. ಆ ವೇಳೆಯಲ್ಲಿ ದಾಂಡೇಲಿಯ ಅಭಿಷೇಕ ಮಾಜಾಳಕರ ತಮ್ಮ ಕಾರನ್ನು ಮಾರಾಟ ಮಾಡಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಅವರನ್ನು ಸಂಪರ್ಕಿಸಿದಾಗ ಬಾಬಲಿ 3 ಲಕ್ಷದ 50 ಸಾವಿರ ರೂಪಾಯಿಗೆ ಕಾರು ಖರೀದಿಸಲು ಸಿದ್ಧರಾಗಿದ್ದರು. ಶಿರಸಿಯ ಬ್ಯಾಂಕ್‌ನಲ್ಲಿ ಸಾಲವಿದ್ದು, ಅದಕ್ಕಾಗಿ ಕಾರಿಗೆ ಸೀಲ್ ಹಾಕಲಾಗಿದೆ ಎಂದರು. ಅದನ್ನು ಹೊರತರಲು 1 ಲಕ್ಷ 90 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಕೇಳಿದ್ದರು.
ಅದರಂತೆ, ಜುಲೈ 8, 2024 ರಂದು, ಬಾಬಲಿ ಅವರು ಅಭಿಷೇಕಗೆ 10 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದು ಮತ್ತು ಉಳಿದ ಮುಂಗಡವನ್ನು ಅವರ ಪತ್ನಿ ಸೋನಾಲಿ (ರಾಮನಗರ ನಿವಾಸಿ) ಖಾತೆಗೆ ಕಳುಹಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಸೋನಾಲಿ ಎಂಬ ಮಹಿಳೆ ಕರೆ ಮಾಡಿ ತನ್ನ ಎಸ್‌ಬಿಐ ಬ್ಯಾಂಕ್ ವಿವರಗಳನ್ನು ನೀಡಿ ಹಣ ಜಮಾ ಮಾಡುವಂತೆ ಹೇಳಿದ್ದಾಳೆ. ಬಳಿಕ ವಿನಾಯಕ ಎಂಬವರು ಕರೆ ಮಾಡಿ ತಾನು ಶಿರಸಿ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದು, ಆದಷ್ಟು ಬೇಗ ಅಭಿಷೇಕ್ ಹಣ ಕಳುಹಿಸುವಂತೆ ತಿಳಿಸಿದ್ದಾನೆ. ಅದರಂತೆ ಬಾಬಲಿ ಅವರು ರಾಮನಗರದ ಕೆಡಿಸಿಸಿ ಬ್ಯಾಂಕ್‌ನಿಂದ ಆಗಸ್ಟ್ 12 ರಂದು 1 ಲಕ್ಷ 50 ಸಾವಿರ ಮತ್ತು ಆಗಸ್ಟ್ 13 ರಂದು 30 ಸಾವಿರವನ್ನು ಸೋನಾಲಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಅಭಿಷೇಕನಿಗೆ ಮುಂಗಡವಾಗಿ ಒಟ್ಟು 1 ಲಕ್ಷ 90 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ.
ಆದರೆ ಹಣ ತಲುಪಿದ ನಂತರ ಆಗಸ್ಟ್ 14 ರಂದು ಅಭಿಷೇಕ ಮತ್ತು ಸೋನಾಲಿ ಅವರನ್ನು ಸಂಪರ್ಕಿಸಿದಾಗ, ಅವರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಅದಲ್ಲದೆ ರಾಮನಗರದಲ್ಲಿರುವ ಅವರ ಮನೆಗೆ ಹೋದಾಗ ಮನೆಯೂ ಮುಚ್ಚಿರುವುದು ಕಂಡುಬಂದಿದೆ. ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡ ವಿನಾಯಕನನ್ನು ಸಂಪರ್ಕಿಸಿದಾಗ ಬ್ಯಾಂಕ್ ಮ್ಯಾನೇಜರ್ ಅಲ್ಲ ದಾಂಡೇಲಿಯವನು ಎಂದು ತಿಳಿದುಬಂದಿದೆ. ಹಾಗಾಗಿ ತಾನು ಮೋಸ ಹೋಗಿರುವುದಾಗಿ ಅರಿತು ಬಾಬಲಿ ಚಾಂಬಾರ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಮನಗರ ಠಾಣೆಯ ಪೊಲೀಸರು ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.