ಯಲ್ಲಾಪುರ: ಯಲ್ಲಾಪುರ ಪಟ್ಟಣ ಪಂಚಾಯತಕ್ಕೆ ಆ.21, ಬುಧವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಕೋಲಾಹಲವೆದ್ದಿದೆ.
ಬಿಜೆಪಿಯಿಂದ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಒಲವು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ನತ್ತ ವಾಲಿರುವುದರಿಂದ ಬಿಜೆಪಿ ಈ ಚುನಾವಣೆಯಲ್ಲಿ ಅವರನ್ನು ಸಂಕಟದಲ್ಲಿ ಸಿಲುಕಿಸಲು ಮುಂದಾಗಿದೆ. ಬಿಜೆಪಿ ಪಕ್ಷದ ಚಿಹ್ನೆಯಡಿ ಆಯ್ಕೆಯಾದ ಶಾಸಕ ಹೆಬ್ಬಾರ್ ಬಿಜೆಪಿ ಸೂಚಿಸಿದ ಅಭ್ಯರ್ಥಿ ಹೊರತಾಗಿ ಬೇರೆಯವರಿಗೆ ಮತ ಹಾಕಬಹುದೆಂಬ ಕಾರಣಕ್ಕೆ ಶಾಸಕ ಶಿವರಾಮ ಹೆಬ್ಬಾರ್ರವರಿಗೆ ಬಿಜೆಪಿ ಸೂಚಿತ ಅಭ್ಯರ್ಥಿಗೆ ಮತ ಹಾಕುವಂತೆ ವಿಫ್ ಜಾರಿಮಾಡಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕಲ್ಪನಾ ಗಜಾನನ ನಾಯ್ಕ್ ತಳ್ಳಿಕೇರಿ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮೇಶ್ವರ ನಾಯ್ಕ್ ಇವರಿಗೆ ಮತ ನೀಡಬೇಕೆಂದು ವಿಫ್ನಲ್ಲಿ ಉಲ್ಲೇಖ ಮಾಡಿದೆ. ಈ ಸಂಬಂದ ಆ.16 ರಂದು ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ವಿಫ್ ಜಾರಿಮಾಡಿದ್ದು ಶಾಸಕರ ಕಛೇರಿಯಲ್ಲಿ ಅವರಿಲ್ಲದೇ ಬೀಗ ಹಾಕಿದ್ದ ಕಾರಣ ಬಾಗಿಲಿಗೆ ಅಂಟಿಸಿ ಬಂದಿದ್ದಾರೆ.ಮತ್ತು ಅವರಿಗೆ ಅಂಚೆ ಮೂಲಕ ಜಾರಿ ಮಾಡಿದ್ದಾರೆ ಎಂದು ಬಿಜೆಪಿ ಮಾಹಿತಿ ನೀಡಿದೆ.