ಯಲ್ಲಾಪುರ: ನೂಲು ಹುಣ್ಣಿಮೆಯ ನಿಮಿತ್ತ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ಸೋಮವಾರ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ನಡೆಯಿತು.
ಈ ನಿಮಿತ್ತವಾಗಿ ದೇವಾಲಯದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ದೇವಾಲಯದ ಅರ್ಚಕ ವಿದ್ವಾನ್ ಗೋಪಾಲಕೃಷ್ಣ ಭಟ್ ಹಾಗೂ ವಿದ್ವಾನ್ ವಿಶ್ವನಾಥ ಭಟ್, ಪ್ರಸನ್ನ ಭಟ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಯಜ್ಞೋಪವೀತ ಧಾರಣೆ ಮಾಡಿಕೊಂಡರು.
ದೇವಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ಕಾರ್ಯದರ್ಶಿಗಳಾದ ನರಸಿಂಹ ಗೇರಗದ್ದೆ, ನಾಗೇಂದ್ರ ಕವಾಳೆ, ಪ್ರಮುಖರಾದ ಎಸ್.ವಿ.ಹೆಗಡೆ, ಜಿ.ಎನ್.ಭಟ್ ತಟ್ಟಿಗದ್ದೆ, ಎನ್.ಎಸ್.ಭಟ್ ಮುಂತಾದವರು ಇದ್ದರು. ತಹಶೀಲ್ದಾರ್ ಅಶೋಕ ಭಟ್, ನಿವೃತ್ತ ತಹಶೀಲ್ದಾರ್ ಡಿ.ಜಿ.ಹೆಗಡೆ ಮುಂತಾದವರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಶಾರದಾಂಬಾ ದೇವರಿಗೆ ಮಹಾಪೂಜೆ ನಡೆಯಿತು.