ದಾಂಡೇಲಿ : ನಗರದ ಎಸ್.ಎಸ್.ಕಂಫರ್ಟ್ಸ್ ಎದುರುಗಡೆ ನೂತನವಾಗಿ ನಿರ್ಮಿಸಲಾದ ವಿಶಾಲವಾದ ಕಟ್ಟಡದಲ್ಲಿ ಗೃಹೋಪಯೋಗಿ, ಗೃಹಾಲಂಕಾರ, ಫರ್ನೀಚರ್ಸ್ ಹಾಗೂ ಇತರ ಉಪಯುಕ್ತ ವಸ್ತುಗಳ ಬೃಹತ್ ಮಾರಾಟ ಮಳಿಗೆಯಾದ ‘ಬ್ರೌನ್ ವುಡ್’ ಶೋರೂಮ್ ಇದರ ವಿದ್ಯುಕ್ತ ಉದ್ಘಾಟನೆಯನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ದಾಂಡೇಲಿಗೆ ಅತಿ ಅವಶ್ಯವಾಗಿ ಬೇಕಾಗಿದ್ದ, ಅದರಲ್ಲಿಯೂ ವಿಶೇಷವಾಗಿ ಬಡವರಿಗೆ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಹಾಗೂ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ವಸ್ತುಗಳ ಹಾಗೂ ಮರದ ಫರ್ನಿಚರ್ ಮತ್ತು ಕುಶನ್ ಫರ್ನಿಚರ್ಸ್ ಗಳ ಮಾರಾಟ ಮಳಿಗೆಯ ಅಗತ್ಯತೆಯನ್ನು ಬ್ರೌನ್ ವುಡ್ ಶೋರೂಮ್ ಶುಭಾರಂಭವಾಗುವ ಮೂಲಕ ಈಡೇರಿಸಿದೆ ಎಂದರು. ಇಂದು ವ್ಯಾಪಕವಾದ ಸ್ಪರ್ಧಾ ಜಗತ್ತಿನಲ್ಲಿ ಗ್ರಾಹಕರನ್ನು ಆಕರ್ಷಿಸಬಲ್ಲ, ಅಷ್ಟೇ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ವಸ್ತುಗಳ ಉತ್ಪನ್ನಗಳನ್ನು ಪೂರೈಸುವುದು ಅಷ್ಟು ಸುಲಭದ ಕೆಲಸವಲ್ಲ. ಆದಾಗ್ಯೂ ಬ್ರೌನ್ ವುಡ್ ಶೋರೂಮ್ ವರ್ಷದಿಂದ ವರ್ಷಕ್ಕೆ ಹಂತ ಹಂತವಾಗಿ ಪ್ರಗತಿಯನ್ನು ಸಾಧಿಸಿ ಇಂದು ನಾಲ್ಕನೇ ಶಾಖೆಯನ್ನು ಪ್ರಾರಂಭಿಸುವ ಮಟ್ಟಿಗೆ ಬೆಳೆದಿರೋದು ನಿಜಕ್ಕೂ ಶ್ಲಾಘನೀಯ. ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅನುದಾನಗಳನ್ನು ಮತ್ತು ಯೋಜನೆಗಳನ್ನು ತಂದ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದಾಂಡೇಲಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ ಎಂದರು. ಪ್ರವಾಸೋದ್ಯಮ ನಗರಕ್ಕೆ ಬ್ರೌನ್ ವಡ್ ಶೋರೂಮ್ ಶುಭಾರಂಭಗೊಂಡಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ ಅನುಕೂಲಕರವಾಗುವ ರೀತಿಯಲ್ಲಿ ಇಲ್ಲಿ ವ್ಯಾಪಾರ ವಹಿವಾಟನ್ನು ನಡೆಸಿ ನಗರದ ಪ್ರಗತಿಗೆ ಈ ಶೋರೂಮ್ ತನ್ನದೇ ಆದ ಕೊಡುಗೆಯನ್ನು ನೀಡುವಂತಾಗಲಿ ಎಂದು ಶುಭವನ್ನು ಹಾರೈಸಿ, ಬ್ರೌನ್ ವುಡ್ ಶೋರೂಮ್ ಸಂಸ್ಥೆಯ ಪ್ರಗತಿಯ ಹಾದಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಹಲವಾಯಿ, ನಗರಸಭೆಯ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರ್, ಕಟ್ಟಡದ ಮಾಲಕರಾದ ಮಧುಕೇಶ್ವರ್ ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭವನ್ನು ಕೋರಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಬ್ರೌನ್ ಶೋರೂಮ್ ಅನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ಬಳಿಕ, ಶೋ ರೂಮ್ ನಲ್ಲಿದ್ದ ಎಲ್ಲಾ ಬಗೆಯ ಉತ್ಪನ್ನಗಳನ್ನು ವೀಕ್ಷಿಸಿ ಆರ್.ವಿ.ದೇಶಪಾಂಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಂದ ಚಂದದ ಮತ್ತು ಆಕರ್ಷಕ ಗೃಹ ಉಪಯೋಗಿ ಉತ್ಪನ್ನಗಳನ್ನು ನೋಡಿದ ಬಳಿಕ ಆರ್.ವಿ.ದೇಶಪಾಂಡೆಯವರು ನನ್ನ ಜೊತೆ ಪತ್ನಿ ಬರುತ್ತಿದ್ದಲ್ಲಿ ಕಿಸೆ ಖಾಲಿ ಆಗುತ್ತಿತ್ತು ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದರು.
ಬ್ರೌನ್ ವುಡ್ ಶೋರೂಮಿನ ಪ್ರವರ್ತಕರಾದ ಸಂತೋಷ್ ಕುಮಾರ್ ಕಲ್ಮಂಜೆ ಹಾಗೂ ಸಂಸ್ಥೆಯ ಪಾಲುದಾರರಾದ ರಾಜೇಶ್ ನಾಯರಿ, ಸುಧಾಕರ್ ಉಪಾಧ್ಯ ಮತ್ತು ಗಿರೀಶ್ ಸಾಲಿಯನ್ ಅವರಲ್ಲಿ ಉದ್ಯಮ ಬೆಳೆದು ಬಂದ ಹಾದಿಯ ಬಗ್ಗೆ ಆರ್.ವಿ.ದೇಶಪಾಂಡೆಯವರು ಪರಸ್ಪರ ಚರ್ಚೆ ನಡೆಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಆರ್.ವಿ.ದೇಶಪಾಂಡೆಯವರನ್ನು ಬ್ರೌನ್ ವುಡ್ ಶೋರೂಮಿನ ಪ್ರವರ್ತಕರಾದ ಸಂತೋಷ್ ಕುಮಾರ್ ಕಲ್ಮಂಜೆ ಅವರು ಸನ್ಮಾನಿಸಿದರು. ಕಟ್ಟಡದ ಮಾಲಕರಾದ ಮಧುಕೇಶ್ವರ್ ಹಿರೇಮಠ್ ಮತ್ತು ಮೋಹನ್ ಹಲವಾಯಿ ಹಾಗೂ ಯಾಸ್ಮಿನ್ ಕಿತ್ತೂರ್ ಅವರನ್ನು ಬ್ರೌನ್ ವುಡ್ ಶೋರೂಮ್ ಸಂಸ್ಥೆಯ ಪಾಲುದಾರರಾದ ರಾಜೇಶ್ ನಾಯರಿ, ಸುಧಾಕರ್ ಉಪಾಧ್ಯ ಮತ್ತು ಗಿರೀಶ್ ಸಾಲಿಯನ್ ಅವರುಗಳು ಸಂಸ್ಥೆಯ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ರೌನ್ ವುಡ್ ಶೋರೂಮ್ ಇದರ ನಿರ್ಮಾಣದ ಸಂದರ್ಭದಲ್ಲಿ ಸಹಕರಿಸಿದ ಮಂಜು ಆರ್ಟ್ಸ್ ಮಾಲಕರಾದ ಮಂಜುನಾಥ್ ನಾಯ್ಕ ಮತ್ತು ಎಲೆಕ್ಟ್ರಿಷಿಯನ್ ಜುಬೇದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಗರಸಭೆಯ ಸದಸ್ಯರು, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಪತ್ರಕರ್ತ ಸಂದೇಶ್.ಎಸ್.ಜೈನ್ ಅವರು ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ಬ್ರೌನ್ ವುಡ್ ಶೋರೂಮ್ ನ ವ್ಯವಸ್ಥಾಪಕರಾದ ಪಂಡರಿ ಧುರಿ ಅವರು ವಂದಿಸಿದರು.