ಕಾರವಾರ: ಭೂಕುಸಿತಗಳು ಮತ್ತು ಪ್ರವಾಹ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಅನುಭವದ ಆಧಾರದ ಮೂಲಕ ತಯಾರಿಸಿದ ಕಾರ್ಯಸಾಧ್ಯ ಕ್ರಿಯಾ ಯೋಜನೆಗಳು ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದಾಗುವ ಘಟನೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ, ಪ್ರಕೃತಿ ವಿಕೋಪದಲ್ಲಿ ಕೈಗೊಳ್ಳಬೇಕಾದ ಅಗತ್ಯ ಸಾಮರ್ಥ್ಯ ಬಲವರ್ಧನೆ ಹಾಗೂ ದುರಂತದ ಸಂದರ್ಭದಲ್ಲಿ ಮಾನಸಿಕ ಆರೈಕೆ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಆಗಸ್ಟ್ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಮಳೆಯಾಗುವ ಮುನ್ಸೂಚನೆ ಇದೆ, ಆದ್ದರಿಂದ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತದ ವತಿಯಂದ ಪೂರ್ವ ಸನ್ನದ್ಧತೆ ಕೈಗೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ. ಮುಂದೆ ಸಂಭವಿಸಬಹುದಾದ ವಿಕೋಪಗಳ ಕುರಿತಂತೆ ಮುನೆಚ್ಚರಿಕೆ ವಹಿಸಿದ್ದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಾಗಲಿದೆ ಹೀಗಾಗಿ ಎಲ್ಲಾ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ಅಗತ್ಯ ಸಹಕಾರ ನೀಡಬೇಕು ಎಂದರು.
ಸಮಗ್ರ ತರಬೇತಿ ಮತ್ತು ಸಂವೇದನೆಯ ಮೂಲಕ ವಿಪತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ಸರ್ಕಾರಿ ಅಧಿಕಾರಿಗಳು, ಮಧ್ಯಸ್ಥಗಾರರು ಮತ್ತು ಸಮುದಾಯಗಳನ್ನು ಸಜ್ಜುಗೊಳಿಸುವ ಮೂಲಕ, ಜಿಲ್ಲೆಯು ಭವಿಷ್ಯದ ವಿಪತ್ತುಗಳ ಪರಿಣಾಮಗಳನ್ನು ನಿರ್ವಹಿಸಲು ಮತ್ತು ತಗ್ಗಿಸಲು, ಅದರ ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಈ ತರಬೇತಿ ಸಹಾಯವಾಗಲಿದೆ ಎಂದರು.
ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಪ್ರಕೃತಿ ವಿಕೋಪ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನೋಡಲ್ ಅಧಿಕಾರಿಗಳಿಗೆ ತಾಲೂಕಿನ ಪೂರ್ತಿ ಮಾಹಿತಿ ಇರುವುದರಿಂದ ವಿಪತ್ತುಗಳಿಗೆ, ವಿಶೇಷವಾಗಿ ಭೂಕುಸಿತಗಳು ಮತ್ತು ಪ್ರವಾಹಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳ ಬಗ್ಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಹಾಗೂ ನಾಳೆಯಿಂದ ಎಲ್ಲಾ ತಾಲೂಕಗಳಲ್ಲಿ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ತಹಶೀಲ್ದಾರರು, ಪಿಡಿಒ, ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಜಿ.ಐ.ಎಸ್ ವರದಿಯಂತೆ 439 ಅಪಾಯಕಾರಿ ಭೂಕುಸಿತ ಸ್ಥಳಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಪ್ರವಾಹ ಆಗುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ನೋಡಲ್ ಅಧಿಕಾರಿಗಳಗೆ ಇದರ ಸಂಪೂರ್ಣ ಮಾಹಿತಿ ಇರುವುದರಂದ ತುರ್ತು ಸಂದರ್ಭಗಳಲ್ಲಿ ಕಾರ್ಯಸಾಧ್ಯವಾದ ಕ್ರಿಯಾ ಯೋಜನೆಗಳನ್ನು ತಯಾರಿ ಮಾಡಿಕೊಂಡಲ್ಲಿ ಯಾವ ಸಮಯದಲ್ಲಿ ಯಾರನ್ನು ಸಂಪರ್ಕಿಸಬೇಕು, ಬದಲಿ ಮಾರ್ಗಗಳ ವ್ಯವಸ್ಥೆ ಕುರಿತು ಕಸ್ಟರ್ ಮಟ್ಟದಲ್ಲಿ ತರಬೇತಿಯನ್ನು ನಾಳೆಯಿಂದ ನೀಡಲಾಗುತ್ತದೆ. ಎಂದರು.
ಪ್ರಕೃತಿ ವಿಕೋಪದ ನಂತರ ಸಂತ್ರಸ್ಥರಾದವರಿಗೆ ಮೂಲಭೂತ ಸೌಕರ್ಯ, ಆರೋಗ್ಯ ಶಿಕ್ಷಣದ ಜೊತೆ ಮಾನಸಿಕ ಆರೈಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಎಲ್ಲರು ತಂಡವಾಗಿ ಕಾರ್ಯನಿರ್ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಮನೆಯ ವಾತಾವರಣ ನಿರ್ಮಾಣ ಮಾಡುವ ಮೂಲಕ ಜನರ ಜೊತೆ ನಾವೆಲ್ಲರೂ ಇದ್ದೆವೆ ಎಂಬ ಭಾವನೆ ಮೂಡಿಸಬೇಕು. ಇದರ ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಗೆ ಸಂತ್ರಸ್ಥರನ್ನು ಯಾವ ರೀತಿ ನಿಭಾಯಿಸಬೇಕು ಅವರ ಜೊತೆ ಹೇಗೆ ವರ್ತಿಸಬೇಕು, ಸಮಾಲೋಚನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾನಸಿಕ ಆರೈಕೆ ತರಬೇತಿ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸುವ ಭೂ ಕುಸಿತಗಳಿಂದಾಗುವ ಅಪಾಯಗಳನ್ನು ತಪ್ಪಿಸಿ, ಜನ ಮತ್ತು ಜಾನುವಾರುಗಳ ಜೀವಕ್ಕೆ ಅಪಾಯವಾಗದಂತೆ ಮುಂಚಿತವಾಗಿ ಮುನ್ನೆಚರಿಕೆ ವಹಿಸುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ, ಭೂ ಕುಸಿತ ಪ್ರದೇಶಗಳನ್ನು ನಿಖರವಾಗಿ ಗುರುತಿಸಿ, ಭೂ ಕುಸಿತ ಸಂಭವಿಸುವುದರ ಬಗ್ಗೆ ಮುಂಚಿತವಾಗಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡುವ 220 ಸ್ಪಾಟರ್ಸ್ ನಿಯೋಜಿಸಲಾಗಿದ್ದು, ಹೈದರಾಬಾದನ ಜಿ.ಐ.ಎಸ್ ತಾಂತ್ರಿಕ ಸಂಸ್ಥೆಯ ಪರಿಣತರಿಂದ ಇವರಿಗೆ ತರಬೇತಿಯನ್ನು ನೀಡಲಾಗುವುದು. ಗುರುತು ಮಾಡುವ ವ್ಯಕ್ತಿಗಳು ಪ್ರತಿನಿತ್ಯ ಅಂತಹ ಸ್ಥಳವನ್ನು ಪರಿಶೀಲಿಸಿದ ಬಗ್ಗೆ ಅಲ್ಲಿನ ಸ್ಥಿತಿಗತಿಗಳ ಅವಲೋಕನ ಮಾಡಿ ಕಚೇರಿಗೆ ವರದಿಯನ್ನು ಸಲ್ಲಿಸಬೇಕಾಗುತ್ತದೆ ಎಂದರು.
ಕೆಎಸ್‌ಎನ್‌ಡಿಎಮ್‌ಸಿ ಯ ಮಾಜಿ ನಿರ್ದೇಶಕ ಡಾ.ಜಿ ಶ್ರೀನಿವಾಸ್ ರೆಡ್ಡಿ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣೆಯ ಯೋಜನೆ ತಯಾರಿಕೆ, ಪುನರ್ ಪರಿಶೀಲನೆಯಲ್ಲಿ ಜಿಲ್ಲಾಡಳಿತದ ಜವಾಬ್ದಾರಿಗಳು ಹಾಗೂ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆಯ ವಿವಿಧ ಹಂತಗಳ ಹಾಗೂ ಯುಎನ್‌ಐಸಿಇಎಫ್ ಹೈದರಾಬಾದ್ ಫೀಲ್ಡ್ ಆಫೀಸ್‌ನ ಡಾ.ಮಟ್ಪಾಡಿ ಪ್ರಭಾತ್ ಕಲ್ಕೂರ, ವ್ಯಕ್ತಿಗಳಿಗೆ ವಿಪತ್ತು ಸಿದ್ಧತೆ ಮತ್ತು ವಿಕೋಪ ನಿರ್ವಹಣೆಯ ವಿವಿಧ ಹಂತಗಳಲ್ಲಿ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಸಮುದಾಯ, ಸಂಘ-ಸ0ಸ್ಥೆಗಳ ಪಾತ್ರ ಮತ್ತು ವೆಂಕಟೇಶ್ ಅಯ್ಯರ್ ಮಾನಸಿಕ ಪ್ರಥಮ ಚಿಕಿತ್ಸೆ ಮತ್ತು ಮಾನಸಿಕ ಆರೈಕೆ ಕುರಿತು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ನಾಗೇಶ ರಾಯ್ಕರ್, ಉಪ ಕಾರ್ಯದರ್ಶಿ(ಅಭಿವೃದ್ಧಿ) ಪ್ರಕಾಶ ಹಾಲಮ್ಮನವರ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.