ದಾಂಡೇಲಿ : ಕೇಂದ್ರ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದ ಬಿಜೆಪಿ ಪಕ್ಷದ ಸುಳ್ಳು ಆರೋಪದ ಕುರಿತಂತೆ ನಗರದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದಿಂದ ಶುಕ್ರವಾರ ಪಕ್ಷದ ಕಾರ್ಯಾಲಯದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ರೇಣುಕಾ ಬಂದಂ ಕೇಂದ್ರ ಸರಕಾರದ ಆಡಳಿತ ವೈಫಲ್ಯತೆ ಹಾಗೂ ಜನ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಕಂಗೆಟ್ಟಿರುವ ಬಿಜೆಪಿ ಪಕ್ಷವು ವ್ಯರ್ಥ ಆರೋಪವನ್ನು ಮಾಡಲು ಹೊರಟಿದೆ. ಸಿದ್ದರಾಮಯ್ಯನವರ ನಾಯಕತ್ವವನ್ನು ಸಹಿಸಿಕೊಳ್ಳದೆ ಅವರ ವಿರುದ್ಧ ಹೋರಾಟವನ್ನು ಬಿಜೆಪಿ ಪಕ್ಷ ಮಾಡಲು ಹೊರಟಿರುವುದು ಉತ್ತಮವಾದ ಬೆಳವಣಿಗೆಯಲ್ಲ ಎಂದರು. ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆ ನೆಮ್ಮದಿಯ ಬದುಕನ್ನು ಕಾಣುವಂತಾಗಿದೆ. ಬಡವರ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಯೋಜನೆಯಾಗಿ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದರು. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಸಾಧನೆಗಳನ್ನು ಸಹಿಸದೆ ಬಿಜೆಪಿ ಪಕ್ಷವು ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರು ಅವರು ಕಾಂಗ್ರೆಸ್ ಪಕ್ಷ ಯಾವತ್ತು ಬಡವರ ಜನಸಾಮಾನ್ಯರ ದೀನ-ದಲಿತರ ಹಾಗೂ ಅಲ್ಪ ಸಂಖ್ಯಾತರ ಏಳಿಗೆಗಾಗಿ ಶ್ರಮಿಸುತ್ತಲೆ ಬಂದಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿ, ಯೋಜನೆಗಳು ಮತ್ತು ಸಾಧನೆಗಳನ್ನು ಸಹಿಸಲಾಗದೆ ಬಿಜೆಪಿ ಪ್ರತಿಭಟನೆಯ ಹಾದಿ ತುಳಿದಿದೆ ಎಂದರು.
ವೇದಿಕೆಯಲ್ಲಿ ನಗರಸಭೆಯ ಸದಸ್ಯರುಗಳಾದ ಶಾಹಿದಾ ಪಠಾಣ್, ಶಿಲ್ಪಾ ಕೊಡೆ, ರುಹಿನಾ ಖತೀಬ್, ಸುಧಾ ರಾಮಲಿಂಗ ಜಾದವ್ ಹಾಗೂ ಪಕ್ಷದ ಪ್ರಮುಖರಾದ ಸ್ಮಿತಾ ರೋಜಾರಿಯೊ ಮೊದಲಾದವರು ಉಪಸ್ಥಿತರಿದ್ದರು.