ಕಾಳಿ ಸೇತುವೆ ಕುಸಿತ: ತಮಿಳುನಾಡು ಮೂಲದ ಚಾಲಕನ ರಕ್ಷಣೆ
ಸಂದೇಶ್ ಎಸ್.ಜೈನ್
ಕಾರವಾರ: ಕಾರವಾರದ ಸದಾಶಿವಘಡದಲ್ಲಿ ನಡೆದ ಸೇತುವೆ ಕುಸಿತಕ್ಕೊಳಗಾಗಿ ನೀರಿಗೆ ಬಿದ್ದ ಲಾರಿಯ ಚಾಲಕನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಮತ್ತು ಸ್ಥಳೀಯ ಶ್ರಮಯೋಗಿ ಮೀನುಗಾರರು ಆಪತ್ಬಾಂಧವರಂತೆ ಸ್ಥಳಕ್ಕೆ ಧಾವಿಸಿ, ಆತನನ್ನು ರಕ್ಷಣೆ ಮಾಡಿದ ಕಾರ್ಯದ ಬಗ್ಗೆ ಜಿಲ್ಲೆಯಾದ್ಯಂತ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ಮಾಹಿತಿಯನ್ನು ಪಡೆದುಕೊಂಡ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಿಶ್ಚಲ್ ಕುಮಾರ್ ತಕ್ಷಣವೇ ತಮ್ಮ ಠಾಣೆಯ ತಾಂತ್ರಿಕ ಸಿಬ್ಬಂದಿಗಳಾದ ಅಶೋಕ್ ಎಸ್. ದುರ್ಗೆಕರ್, ಸುದರ್ಶನ್ ಪಿ. ತಾಂಡೇಲ್ ಹಾಗೂ ಸ್ಥಳೀಯ ಮೀನುಗಾರರಾದ ಸೂರಜ್ ಗೋಪಿನಾಥ ಸಾರಂಗ್, ಕರಣ್ ರಾಜೇಂದ್ರ ನಾವಗೆ, ಸುದೇಶ್ ವಿಠೋಬಾ ಸಾರಂಗ್, ಲಕ್ಷ್ಮಿಕಾಂತ ದೇವಿದಾಸ್ ಮೆಹತಾ ಮತ್ತು ದಿಲೀಪ್ ದೇವಿದಾಸ ಮೆಹತಾ ತಂಡವನ್ನು ಶ್ರೀ ಭದ್ರಕಾಳಿ ನಾಗದೇವತಾ ಬೋಟ್ ಮತ್ತು ಶ್ರೀ ಶಾಂತದುರ್ಗ ಮೀನುಗಾರಿಕಾ ಪಾತಿದೋಣಿಗಳ ಮೂಲಕ ಲಾರಿ ಬಿದ್ದ ಸ್ಥಳಕ್ಕೆ ಸುರಕ್ಷಾ ಪರಿಕರಗಳೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಈ ತಂಡ ಲಾರಿ ಬಿದ್ದ ಸ್ಥಳಕ್ಕೆ ಧಾವಿಸಿ ಟಾರ್ಚ್ ಬೆಳಕಿನ ಸಹಾಯದೊಂದಿಗೆ ಲಾರಿಯ ಕ್ಯಾಬಿನ್ನಲ್ಲಿ ರಕ್ಷಣೆಗಾಗಿ ಅಂಗಲಾಚುತ್ತಿದ್ದ ಚಾಲಕ ತಮಿಳುನಾಡು ರಾಜ್ಯದ ಬಾಲಮುರುಗನ್ ಪುಸಾಮಿ ಈತನಿಗೆ ಮೊದಲು ಧೈರ್ಯ ತುಂಬಿಸಿ ಸುರಕ್ಷಾ ಜಾಕೆಟನ್ನು ನೀಡಿ, ದೋಣಿಯಲ್ಲಿ ಮಲಗಿಸಿ, ನದಿಯ ದಡಕ್ಕೆ ಕರೆದುಕೊಂಡು ಬಂದು ತಕ್ಷಣವೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಘಟನೆಯ ಮಾಹಿತಿಯನ್ನು ಪಡೆದು ತಡರಾತ್ರಿಯಲ್ಲೂ ಸಿಬ್ಬಂದಿಗಳನ್ನು ಮತ್ತು ಮೀನುಗಾರರನ್ನು ಒಟ್ಟುಗೂಡಿಸಿ, ದೋಣಿಯ ವ್ಯವಸ್ಥೆಯನ್ನು ಮಾಡಿ, ದೋಣಿಗೆ ಬೇಕಾದ ಪೆಟ್ರೋಲನ್ನು ಒದಗಿಸಿಕೊಟ್ಟು, ಸ್ಥಳದಲ್ಲಿದ್ದುಕೊಂಡು ಈ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದ ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕರಾದ ನಿಶ್ಚಲ್ ಕುಮಾರ್ ಮತ್ತು ಇಬ್ಬರು ತಾಂತ್ರಿಕ ಸಿಬ್ಬಂದಿಗಳು ಹಾಗೂ ಐವರು ಮೀನುಗಾರರನ್ನೊಳಗೊಂಡ ತಂಡದ ಕಾರ್ಯಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.