ಸಿದ್ದಾಪುರ : ತಾಲೂಕಿನಾದ್ಯಂತ ಕಳೆದ ರವಿವಾರದಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕೆಲವು ಕಡೆ ಸಂಪೂರ್ಣವಾಗಿ ಮನೆ ನಾಶವಾದರೆ ಇನ್ನು ಹಲವು ಕಡೆ ಮನೆಯ ಗೋಡೆ ಕುಸಿತ ಹಾಗೂ ಮನೆ ಮೇಲೆ ಮರ ಬಿದ್ದು ನಷ್ಟವಾಗಿದೆ ಮತ್ತು ರೈತರು ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ.
ಆದರೆ ಸರ್ಕಾರ ಇದುವರೆಗೂ ಪರಿಹಾರ ಘೋಷಣೆ ಮಾಡದೇ, ಸಂತ್ರಸ್ತರಿಗೆ ಧೈರ್ಯ ತುಂಬದೆ ಇರುವುದು ಬೇಸರದ ಸಂಗತಿಯಾಗಿದೆ. ಕೂಡಲೇ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಬೇಡ್ಕಣಿ ಗ್ರಾಮ ಪಂಚಾಯತ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೃಷ್ಣಮೂರ್ತಿ ಮಡಿವಾಳ ಕಡಕೇರಿ ಒತ್ತಾಯಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದವರು ಇತ್ತ ಇದ್ದ ಮನೆ ಇಲ್ಲದೆ ಅತ್ತ ಪರಿಹಾರದ ಘೋಷಣೆಯೂ ಇಲ್ಲದೆ ಅತಂತ್ರರಾಗಿದ್ದಾರೆ. ಸರಕಾರ ಕೂಡಲೇ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರ ಪರಿಸ್ಥಿತಿ ವಿಚಾರಿಸಿ ಅವಶ್ಯಕತೆ ಪೂರೈಸಬೇಕು.ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಸರಕಾರಕ್ಕೆ ವರದಿ ನೀಡಿದ್ದಾರೆ.ಆದರೆ ಸರಕಾರ ಮಾತ್ರ ಯಾವುದೇ ಘೋಷಣೆ ಮಾಡಿಲ್ಲ ಈ ಹಿಂದೆ ಸರಕಾರಗಳು ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಕೂಡಲೇ ಪರಿಹಾರ ಘೋಷಣೆ ಮಾಡುವುದರ ಜೊತೆಗೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದವು. ಅಲ್ಪ ಹಾನಿಗೆ ಐವತ್ತು ಸಾವಿರ, ಸಂಪೂರ್ಣ ಹಾನಿಗೆ ಐದು ಲಕ್ಷ, ವಾಸ ಮಾಡಲು ಯೋಗ್ಯವಿಲ್ಲದ ಮನೆಗಳಿಗೆ ಒಂದು ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಈಗಾಗಲೇ ತಾಲೂಕಿನಲ್ಲಿ ಗದ್ದೆ ನಾಟಿ ಕಾರ್ಯ ಆರಂಭವಾಗಿತ್ತು ಆದರೆ ಗದ್ದೆಗಳಿಗೆ ಪ್ರವಾಹ ನುಗ್ಗಿದ ಪರಿಣಾಮ ನಾಟಿ ಮಾಡಲು ಆಗದೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ, ವಿಪರೀತ ಮಳೆ ಸುರಿಯುತ್ತಿರುವುದರಿಂದ ರೈತರು ಅಡಿಕೆಗೆ ಮದ್ದು ಸಿಂಪಡಣೆ ಮಾಡಲು ಆಗದೆ ಕೊಳೆ ಬಂದರೆ ಗತಿ ಏನು ಎನ್ನುವ ಚಿಂತೆ ಕಾಡತೊಡಗಿದೆ. ಕೃಷಿ ಚಟುವಟಿಕೆ ಮೇಲೂ ಭಾರಿ ಪರಿಣಾಮ ಬೀರಿದೆ ಹಾಗಾಗಿ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಜನತೆಯ ಪರವಾಗಿ ನಿಂತು ಪರಿಹಾರಗಳನ್ನು ನೀಡಬೇಕು ಎಂದು ವಿನಂತಿಸಿದ್ದಾರೆ.
ಕೋಟ್
” ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿ ಜನತೆಗೆ ಹಲವಾರು ತೊಂದರೆ ಎದುರಾಗಿವೆ. ಗುಡ್ಡಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿ ವಾಹನ ಸಂಪರ್ಕ ಕಡಿತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಂಡು ಜನತೆಗೆ ಎದುರಾದ ತೊಂದರೆ ಸರಿಪಡಿಸಲಿ ” ಕೃಷ್ಣಮೂರ್ತಿ ಮಡಿವಾಳ ಬೇಡ್ಕಣಿ ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ