ಶಿರಸಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅವಘಡಗಳು ಸಂಭವಿಸುತ್ತಿರುವುದು ವರದಿಯಾಗಿದೆ. ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಗುಡ್ಡ ಕುಸಿದಿರುವ ಪರಿಣಾಮ ಕಳೆದ 35 ಗಂಟೆಗಳಿಂದ ಸಂಪರ್ಕ ಕಡಿತಗೊಂಡಿದ್ದು, ಜು.17, ಬುಧವಾರ ಸಂಜೆಯ ವೇಳೆಗೆ ರಸ್ತೆ ತೆರವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ 1:45 ರ ನಂತರ ಮಂಗಳವಾರ ಮಣ್ಣು, ಮರ ಗಿಡಗಳ ತೆರವು ನಡೆದಿತ್ತು. ಆದರೆ ಧರೆಯ ಮೇಲಿನ ಗಿಡಮರಗಳು ಸತತವಾಗಿ ಜಾರಿ ಬರುತ್ತಿರುವುದರಿಂದ ಸಂಪೂರ್ಣ ತೆರವು ಕಷ್ಟಸಾಧ್ಯವಾಗಿದೆ. ಬುಧವಾರ ಬೆಳಗ್ಗಿನಿಂದಲೇ ಪುನಃ ಕೆಲಸ ಆರಂಭವಾಗಿದ್ದು, ಸಂಜೆಯವರೆಗೆ ತೆರವು ಕಾರ್ಯ ನಡೆಯಬಹುದೆಂದು ಅಂದಾಜಿಸಲಾಗಿದೆ.
ಬುಧವಾರ ಮಳೆ ಬಾರದೇ ಹೋದರೆ ಮಣ್ಣು ಜರಿಯುವದು ನಿಲ್ಲಬಹುದು. ಮಳೆ ಆಧರಿಸಿ ಸಾಧ್ಯತೆ ಗೊತ್ತಾಗಲಿದೆ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಸಿದ್ದಾರೆ. ಈ ಮಧ್ಯೆ ಕೊರೆದ ಧರೆಯ ನಡುವೆ ಒರತೆ ನೀರೂ ಬರುತ್ತಿದ್ದು, ಇದೂ ಗುಡ್ಡವನ್ನು ಜಾರಿಸಲು ಕಾರಣ ಆಗುತ್ತಿದೆ ಎನ್ನಲಾಗಿದೆ. ವೈಜ್ಞಾನಿಕವಾಗಿ ಸಾಗರ ಮಾಲಾ ಯೋಜನೆಯಲ್ಲಿ ಹೆದ್ದಾರಿ ಅಗಲೀಕರಣ, ಧರೆ ಕತ್ತರಿಸುವಲ್ಲಿ ವಿಫಲ ಆಗಿದ್ದೇ ಇದಕ್ಕೆ ಸಮಸ್ಯೆ ಎನ್ನಲಾಗಿದೆ.