ಶಿರಸಿ: ನಗರಸಭೆ 30ನೇ ವಾರ್ಡ ರಾಮನಬೈಲ್ ಸುತ್ತಮುತ್ತಲಿನ ಬಹಳ ಜನರು ಡೆಂಗ್ಯೂ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ಈ ಭಾಗದ ನೂರಾರು ಜನರು ಆಸ್ಪತ್ರೆ ಸೇರಿರುತ್ತಾರೆ.
ರಾಮನಬೈಲ್ ಭಾಗದ ಸುತ್ತಮುತ್ತಲಿನ ಗಟಾರಗಳನ್ನು ಕ್ಲೀನ್ ಮಾಡಿಸದೇ ಇರುವುದರಿಂದ ಕೊಳಚೆ ನೀರು ನಿಂತು ಇದರಿಂದ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ರಾಮನಬೈಲ ಭಾಗದಲ್ಲಿ ದಲಿತರು ಹಿಂದುಳಿದ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದವರು ವಾಸಿಸುತ್ತಿದ್ದು ಇವರೆಲ್ಲರಿಗೆ ಡೆಂಗ್ಯೂ ಜ್ವರದಿಂದ ತೊಂದರೆಯಾಗುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ ರೋಗಿಗಳನ್ನು ಎಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಕಾರಣ ನಗರಸಭೆಯವರು ಶೀಘ್ರವಾಗಿ ಗಟಾರ ಸ್ವಚ್ಚಗೊಳಿಸಿ ಸೊಳ್ಳೆ ನಿವಾರಕ ಔಷಧಿ ಸಿಂಪಡಿಸಿ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ದಲಿತ ಸಮಿತಿ ಪರವಾಗಿ ಮಹಿಳಾ ಅಧ್ಯಕ್ಷೆ ಯಶೋಧಾ ವೈ. ಒತ್ತಾಯಿಸಿದ್ದಾರೆ.