ದಾಂಡೇಲಿ : ನಗರದ ಕನ್ಯಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಹಲವಾರು ವರ್ಷಗಳಿಂದಲೂ ಹಾಗೂ ಕಳೆದ ಒಂದು ವರ್ಷದಿಂದ ಮುಖ್ಯೋಪಾಧ್ಯಾಯಿನಿಯಾಗಿ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಶಶಿಕಲಾ.ಆರ್. ಬಂಟ್ ಅವರಿಗೆ ಗೌರವ ಸನ್ಮಾನದೊಂದಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕನ್ಯಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಮಾಧ್ಯಮಿಕ ಶಿಕ್ಷಣ ನೌಕರರ ಸಂಘದ ಅಧ್ಯಕ್ಷರಾದ ಪ್ರಭಾಕರ್ ಬಂಟ್ ಸದಾ ಹಸನ್ಮುಖಿ ವ್ಯಕ್ತಿತ್ವದ ಶಶಿಕಲಾ ಬಂಟ್ ಶಿಸ್ತುಬದ್ಧ ಸೇವೆಯ ಮೂಲಕ ಗಮನ ಸೆಳೆದವರು. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಯಲ್ಲಿ ಉನ್ನತ ಆದರ್ಶ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಶಶಿಕಲಾ ಬಂಟ್ ಅವರ ವ್ಯಕ್ತಿತ್ವ ಪರಿಣಾಮಕಾರಿಯಾಗಿದೆ ಎಂದರು.
ದಾಂಡೇಲಿ ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ರಾಜೇಂದ್ರ ಕೋಡ್ಕಣಿ ಮಾತನಾಡಿ ಶಶಿಕಲಾ ಬಂಟ್ ಮಾತೃ ಹೃದಯದ ವಾತ್ಸಲ್ಯಮಯಿ. ವಿದ್ಯಾರ್ಥಿಗಳಿಗೆ ತಾಯಿಯಂತೆ ಪ್ರೀತಿಯಿಂದ ಕಲಿಸಿದ ಗುರುಮಾತೆ. ನಮ್ಮ ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಶಶಿಕಲಾ ಬಂಟ ಅವರ ಕೊಡುಗೆ ಅಪಾರವಾಗಿದೆ. ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಖಜಾಂಚಿ ಅರುಣಾದ್ರಿ ರಾವ್, ಎಸ್.ಜಿ.ಬಿರಾದರ, ನಮೀತಾ ನಾರ್ವೇಕರ ಅವರು ಶಶಿಕಲಾ.ಆರ್.ಬಂಟ್ ಅವರ ಶೈಕ್ಷಣಿಕ ಕಾಳಜಿ ಮತ್ತು ಸೇವೆಯನ್ನು ಶ್ಲಾಘಿಸಿ ನಿವೃತ್ತ ಜೀವನಕ್ಕೆ ಶುಭವನ್ನು ಕೋರಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಶಿಕಲಾ ಆರ್.ಬಂಟ್ ಇಷ್ಟು ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಲು ಮಾರ್ಗದರ್ಶನವನ್ನು ನೀಡಿ ಪ್ರೋತ್ಸಾಹಿಸಿದ ಸಂಸ್ಥೆಯ ಪದಾಧಿಕಾರಿಗಳಿಂದ ಮತ್ತು ಸದಸ್ಯರಿಗೆ ಸದಾ ಋಣಿಯಾಗಿರುತ್ತೇನೆ. ಸಂಸ್ಥೆಯ ಶಿಕ್ಷಕ ವೃಂದದವರು ನೀಡಿದ ನಿರಂತರ ಸಹಕಾರ ಇಲ್ಲಿಯ ವಿದ್ಯಾರ್ಥಿಗಳು ನೀಡಿದ ಗೌರವದ ಪ್ರೀತಿಯನ್ನು ಎಂದು ಮರೆಯಲಾಗದು. ಈ ಶಾಲೆ ಮತ್ತು ಇಲ್ಲಿಯ ವಾತಾವರಣ ನನ್ನ ಜೀವನದ ಯಶಸ್ಸಿಗೆ ಬಹುಮೂಲ್ಯ ಕೊಡುಗೆಯನ್ನು ನೀಡಿದೆ. ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ. ಜೀವನದ ಕಟ್ಟ ಕಡೆಯವರೆಗೂ ಈ ಶಾಲೆಯ ನೆನಪು ಸದಾ ಹಸಿರಾಗಿ ನನ್ನ ಉಸಿರಲ್ಲಿ ಇರುತ್ತದೆ ಎಂದು ಹೇಳಿ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಾಂಡೇಲಿ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ಟಿ.ಆರ್.ಚಂದ್ರಶೇಖರ್, ಶಶಿಕಲಾ ಬಂಟ್ ಅವರು ಪರಸ್ಪರ ಸೌಹಾರ್ದತೆಯ ವಾತಾವರಣವನ್ನು ಬಯಸುವವರು. ಈ ಶಾಲೆಯಲ್ಲಿ ಕೌಟುಂಬಿಕ ವಾತಾವರಣ ಇಷ್ಟು ಗಟ್ಟಿಯಾಗಿ ಇರಲು ಶಶಿಕಲಾ ಬಂಟ್ ಅವರ ಬದ್ಧತೆಯು ಪ್ರಮುಖವಾಗಿದೆ ಎಂದು ನಿವೃತ್ತ ಜೀವನಕ್ಕೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪರವಾಗಿ ಮತ್ತು ಶಿಕ್ಷಕ ವೃಂದದವರ ಪರವಾಗಿ ಶಶಿಕಲಾ.ಆರ್.ಬಂಟ್ ಮತ್ತವರ ಪತಿ ಮಂಗೇಶ್ ಬಂಟ್ ಅವರನ್ನು ದಂಪತಿ ಸಮೇತರಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಹಿರಿಯ ಶಿಕ್ಷಕರಾದ ಬಿಜು ನಾಯಕ್ ಸ್ವಾಗತಿಸಿದರು. ಶಿಕ್ಷಕಿ ಡಿ.ಭಜಂತ್ರಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಫಬಿನಾ ವಂದಿಸಿದರು. ಶಿಕ್ಷಕ ಮಹಾಂತೇಶ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರು.