ಶಿರಸಿ: ಕಾಫಿ ಮತ್ತು ಕಾಳುಮೆಣಸು ಮಾಹಿತಿ ಕಾರ್ಯಾಗಾರವು ಜು.2ರಂದು ಟಿ.ಎಂ.ಎಸ್ ಸಭಾಭವನದಲ್ಲಿ ಯಶಸ್ವಿಯಾಗಿ ನೆರವೇರಿತು.
ಟಿ.ಎಂ.ಎಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಾಗಿ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸೋಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ|| ಜೆ.ಎಸ್. ನಾಗರಾಜ ಜಂಟಿ ನಿರ್ದೇಶಕರು-ಸಂಶೋಧನೆ, ಡಾ|| ಬಾಬು ಮುಖ್ಯಸ್ಥರು, ಬೇಸಾಯ ಶಾಸ್ತç ಹಾಗೂ ಡಾ|| ಹರ್ಷ ವಿಜ್ಞಾನಿಗಳು, ಸಸ್ಯ ತಳಿ ಶಾಸ್ತç ಇವರುಗಳು ಹಾಗೂ ಕಾಳುಮೆಣಸಿನ ಬೆಳೆಗಾರರೂ ಕೃಷಿ ತಜ್ಞರೂ ಆದ ರಾಜೇಂದ್ರ ಹೆಗಡೆ ಸಾಲ್ಕಣಿ ಭಾಗವಹಿಸಿದ್ದರು.
ಅಡಿಕೆ ಬೆಳೆಗೆ ಉಪಬೆಳೆಯಾಗಿ ಕಾಳುಮೆಣಸು ಮತ್ತು ಕಾಫಿ ಬೆಳೆ ಪದ್ದತಿಗೆ ಒತ್ತು ಕೊಟ್ಟಿದ್ದ ಕಾರ್ಯಕ್ರಮದಲ್ಲಿ ಡಾ|| ಜೆ.ಎಸ್. ನಾಗರಾಜರವರು ಜಗತ್ತಿನ ಹಾಗೂ ದೇಶೀಯ ಕಾಫಿ ಬೆಳೆಯ ಕುರಿತು ವಿವರಗಳನ್ನು ಕೊಡುತ್ತ ನಮ್ಮ ದೇಶದ ಕಾಫಿ ಉತ್ಪಾದನೆಯ ಶೇ.70 ರಷ್ಟು ಹೊರ ದೇಶಗಳಿಗೆ ರಫ್ತಾಗುತ್ತಿದೆ ಅಲ್ಲದೆ ದೇಶೀಯ ಆಂತರಿಕ ಬೇಡಿಕೆಯೂ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ ಕಾಫಿಗೆ ಉಜ್ವಲ ಭವಿಷ್ಯ ಇರುವುದಾಗಿ ತಿಳಿಸಿದರು. ಶಿರಸಿಯ ಕೆಲವು ಭಾಗಗಳಲ್ಲಿ ಈಗಾಗಲೇ ಚಂದ್ರಗಿರಿ ಕಾಫಿಯನ್ನು ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ಹಾಗೂ ಇಲ್ಲಿ ಬೆಳೆದ ಕಾಫಿಯ ಗುಣಮಟ್ಟವನ್ನು ಪರೀಕ್ಷಿಸಿದಾಗ ಚಿಕ್ಕಮಗಳೂರಿನಲ್ಲಿಯ ಕಾಫಿಯ ಗುಣಮಟ್ಟಕ್ಕೆ ಯಾವ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಅಂಕಿ-ಅಂಶ ಸಹಿತ ಪ್ರಸ್ತುತಪಡಿಸಿದರು. ಡಾ|| ಹರ್ಷ ಅವರು ಚಂದ್ರಗಿರಿ ಕಾಫಿಯ ಗುಣ-ವಿಶೇಷತೆಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಕಸಿ ಕಾಳುಮೆಣಸನ್ನು ಬೆಳೆದು ಯಶ ಕಂಡಿರುವ ಪ್ರಗತಿಪರ ಕೃಷಿಕರಾದ ರಾಜೇಂದ್ರ ಹೆಗಡೆ, ಸಾಲ್ಕಣಿ ಇವರು ತಮ್ಮ ಕಸಿ ಕಾಳುಮೆಣಸು ಕೃಷಿಯ ಅನುಭವಗಳನ್ನು ಹಂಚಿಕೊಂಡರು.
ಟಿ.ಎಂ.ಎಸ್.ನ ಅಧ್ಯಕ್ಷರಾದ ಜಿ.ಟಿ.ಹೆಗಡೆ ತಟ್ಟೀಸರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರಾದ ಜಿ.ಎಂ.ಹೆಗಡೆ ಮುಳಖಂಡ ಮತ್ತು ಸಂಸ್ಥೆಯ ಹಿಂದಿನ ಅಧ್ಯಕ್ಷರು ಹಾಲೀ ನಿರ್ದೇಶಕರಾದ ಜಿ.ಎಂ.ಹೆಗಡೆ ಹುಳಗೋಳ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚಿನ ಆಸಕ್ತ ರೈತರು ಮತ್ತು ಪ್ರಾಥಮಿಕ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಕಾಫಿ, ಕಾಳುಮೆಣಸು ಕುರಿತು ಉಪಯುಕ್ತವಾದ ಸಾಕಷ್ಟು ಮಾಹಿತಿ ಪಡೆದುಕೊಂಡರು.