ಶಿರಸಿ: ವಿದ್ಯಾರ್ಥಿಗಳು ಕಲಿಕಾ ವಿಧಾನದ ಜೊತೆ ದೈನಂದಿನ ವಿದ್ಯಮಾನ, ಸಾಂಸ್ಕೃತಿಕ ಬದುಕು ,ನಮ್ಮ ಇತಿಹಾಸದ ಕುರಿತು ಅರಿತಿರಬೇಕು ಎಂದು ಕಸಾಪ ಶಿರಸಿ ತಾಲೂಕಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಹೇಳಿದರು.
ನಗರದ ಚಿಪಗಿ ಜೆಎಂಜೆ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಣಾಮಕಾರಿ ಕಲಿಕಾ ವಿಧಾನಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂದಿನ ಶಿಕ್ಷಣ ಪದ್ಧತಿಯಂತೆ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದರೂ ಜೀವನ ಶಿಕ್ಷಣದಲ್ಲಿ ಸೋಲುತ್ತಿದ್ದಾರೆ.ಆಪ್ತವಾದ ಒಂದು ಪತ್ರ ಬರೆಯಿರಿ ಎಂದರೂ ತಿಣುಕಾಡುವ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ ಎಂದರು. ಸಾಹಿತಿ ಹಾಗೂ ವಕೀಲ ಆನಂದ ಏಣಗಿ ಕೃತಿ ಪರಿಚಯಿಸಿ ಮಾತನಾಡಿ, ಮಕ್ಕಳಲ್ಲಿ ಅಶಿಸ್ತು ಹೆಚ್ಚುತ್ತಿದೆ.ಕಷ್ಟಪಟ್ಟು ಕಲಿಯುದಕ್ಕಿಂತ ಇಷ್ಟ ಪಟ್ಟು ಕಲಿಯುವುದನ್ನು ರೂಢಿಸಿಕೊಳ್ಳಬೇಕು. ಈ ಕೃತಿಯ ಲೇಖಕರಾದ.ಸ.ಏಸು ದಾಸ ರವರು ತಮ್ಮ ಬರಹದಲ್ಲಿ ಸುಲಭ ಕಲಿಕೆ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವದರ ಬಗೆಗೆ ಬರೆದಿದ್ದಾರೆ.ಮಕ್ಕಳಿಗೆ ಈ ಕೃತಿ ಪರಿಣಾಮಕಾರಿ ಎಂದರು.
ವೇದಿಕೆಯಲ್ಲಿ ಜೆ.ಎಂಜೆ ಮುಖ್ಯ ಶಿಕ್ಷಕಿ ಸಿಸ್ಟರ್ ಪಿಲ್ಲು, ಮಾಜಿ ಸೈನಿಕ ವಿವೇಕಾನಂದ ಬಿ ಉಪಸ್ಥಿತರಿದ್ದರು. ಕೃತಿಕಾರ ಸ.ಏಸುದಾಸ ಸ್ವಾಗತಿಸಿದರು.ಜೆಎಂಜೆ ಕಾಲೇಜು ಪ್ರಾಚಾರ್ಯೆ ಸಿಸ್ಟರ್ ಅಮಲಾ ವಂದಿಸಿದರು.