ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ ಜು.2 ರಂದು ಬೆಳಗ್ಗೆ 10 ಕ್ಕೆ ಶಾಸಕ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಕುಂದು ಕೊರತೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕೆಂದು ತಹಸೀಲ್ದಾರ ಅಶೋಕ ಭಟ್ಟ ಹೇಳಿದರು.
ಅವರು ಈ ಕುರಿತು ತಹಸೀಲ್ದಾರ ಕಚೇರಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದರು. ರೈತರು ತಮ್ಮ ಪಹಣಿ ಪತ್ರಿಕೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಈಗಾಗಲೇ ಈ ಕಾರ್ಯ ಪ್ರಗತಿಯಲ್ಲಿದ್ದು, ತಾಲೂಕಿನಲ್ಲಿ ಶೇ.45 ರಷ್ಟು ಪೂರ್ಣಗೊಂಡಿದೆ. ಜುಲೈ 30 ರವರೆಗೆ ಅವಕಾಶವಿದ್ದು, ಎಲ್ಲಾ ರೈತರೂ ಲಿಂಕ್ ಮಾಡಿಸುವಂತೆ ವಿನಂತಿಸಿದರು.
ತಾಲೂಕಿನಲ್ಲಿ ಮಳೆಗಾಲ ಆರಂಭವಾಗಿದ್ದು, ಪ್ರಕೃತಿ ವಿಕೋಪಗಳನ್ನು ಎದುರಿಸಲು ತಾಲೂಕಾಡಳಿತ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಕಾಳಜಿ ಕೇಂದ್ರಗಳನ್ನು ಗುರುತಿಸಿ, ಅಲ್ಲಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿ ವಿಕೋಪ ಸಹಾಯವಾಣಿ ಆರಂಭಿಸಲಾಗಿದ್ದು,Tel:+919902571927 ಗೆ ಸಂಪರ್ಕಿಸಬಹುದು ಎಂದರು.