Slide
Slide
Slide
previous arrow
next arrow

ಆಡಳಿತ ಸುಧಾರಣಾ ಆಯೋಗದಿಂದ ಇದುವರೆಗೆ 5039 ಶಿಫಾರಸ್ಸು ; ಆರ್.ವಿ.ಡಿ. ಮಾಹಿತಿ

300x250 AD

ಕಾರವಾರ: ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ಮಾಡಬೇಕಾದ ಸುಧಾರಣೆಗಳನ್ನು ಹಾಗೂ ಇಲಾಖೆಗಳ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಆದ್ಯತೆಯನ್ನು ನೀಡಿದ್ದು, ಜನವರಿ 2024 ರ ಅಂತ್ಯಕ್ಕೆ 39 ಇಲಾಖೆಗಳಿಗೆ ಸಂಬಂಧಿಸಿದ 7 ವರದಿಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಈ ವರದಿಗಳಲ್ಲಿ ಒಟ್ಟು 5039 ಶಿಫಾರಸ್ಸುಗಳನ್ನು ಮಾಡಲಾಗಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ, ಆಡಳಿತ ಸುಧಾರಣೆಯ ಬಗ್ಗೆ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು.
ಮೇ 2024 ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ಸರ್ಕಾರದ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆ.ಸು) ಯವರೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಬಗ್ಗೆ ಮಾಸಿಕ ಸಭೆಗಳಲ್ಲಿಯೂ ಸಹ ಪರಿಶೀಲಿಸಲು ತಿಳಿಸಲಾಗಿತ್ತು. ಇದರ ಪರಿಣಾಮವಾಗಿ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಗಣನೀಯ ಪ್ರಗತಿಯಾಗಿದೆ ಎಂದರು.
ಆಯೋಗವು ಜೂನ್ -2021ರಲ್ಲಿ ಕಂದಾಯ ಇಲಾಖೆ, ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದಂತೆ ಮೊದಲನೆಯ ವರದಿಯಲ್ಲಿ ಕ್ರಮವಾಗಿ 528, 111 ಮತ್ತು 217 ಸೇರಿದಂತೆ ಒಟ್ಟು-856 ಶಿಫಾರಸ್ಸುಗಳನ್ನು ಮಾಡಿದೆ. ಕಳೆದ 3 ವರ್ಷಗಳಲ್ಲಿ ಇಲಾಖೆಗಳ ಶಿಫಾರಸ್ಸುಗಳ ಅನುಷ್ಠಾನ ಕುರಿತಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಸಂಬಂಧಿಸಿದ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ ಹಾಗೂ ಸಿಆಸುಇ (ಆಸು) ಇಲಾಖೆಯ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳೊಂದಿಗೆ ಕೂಲಂಕುಷವಾಗಿ ಪರಿಶೀಲಿಸಲಾಗಿದೆ.
ಅದರಂತೆ ಕಂದಾಯ ಇಲಾಖೆ ಕುರಿತಂತೆ ನೀಡಿರುವ 528 ಶಿಫಾರಸ್ಸುಗಳಲ್ಲಿ 205 ಅನುಷ್ಠಾನಗೊಳಿಸಿದ್ದು, 76 ಅನುಷ್ಠಾನ ಹಂತದಲ್ಲಿ ಹಾಗೂ 247 ಶಿಫಾರಸ್ಸುಗಳು ಪರಿಶೀಲನೆಯಲ್ಲಿವೆ. ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದಂತೆ 111 ಶಿಫಾರಸ್ಸುಗಳಲ್ಲಿ 37 ಅನುಷ್ಠಾನಗೊಳಿಸಿದ್ದು, 18 ಅನುಷ್ಠಾನ ಹಂತದಲ್ಲಿ ಹಾಗೂ 56 ಶಿಫಾರಸ್ಸುಗಳು ಪರಿಶೀಲನೆಯಲ್ಲಿವೆ. ಸಾರಿಗೆ ಇಲಾಖೆಯಲ್ಲಿನ 217 ಶಿಫಾರಸ್ಸುಗಳಲ್ಲಿ 132 ಅನುಷ್ಠಾನಗೊಳಿಸಿದ್ದು, 4 ಅನುಷ್ಠಾನ ಹಂತದಲ್ಲಿ ಹಾಗೂ 81 ಶಿಫಾರಸ್ಸುಗಳು ಪರಿಶೀಲನೆಯಲ್ಲಿವೆ. ಈ ಇಲಾಖೆಗಳಲ್ಲಿ ಅನುಷ್ಠಾನದ ಹಂತದಲ್ಲಿರುವ 98 ಶಿಫಾರಸ್ಸುಗಳನ್ನು ಒಂದು ತಿಂಗಳ ಒಳಗೆ ಅನುಷ್ಠಾನಗೊಳಿಸಲು ಹಾಗೂ ಪರಿಶೀಲನೆಯಲ್ಲಿರುವ 165 ಶಿಫಾರಸ್ಸುಗಳನ್ನು ತಕ್ಷಣವೇ ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಮಾಡಲು ಸೂಚಿಸಲಾಗಿದೆ ಎಂದರು.
ಆಯೋಗದ 2 ನೇ ವರದಿಯಲ್ಲಿ ಪ್ರಸ್ತಾಪಿತವಾಗಿರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಒಳಾಡಳಿತ ಇಲಾಖೆ ಹಾಗೂ ಆಯೋಗದ 3ನೇ ವರದಿಯಲ್ಲಿ ಪ್ರಸ್ತಾಪಿತವಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ಇಂಧನ ಇಲಾಖೆಗಳಿಗೆ ಸಂಬಂಧಿಸಿದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಕುರಿತು ಜುಲೈ-2024 ರಲ್ಲಿ ಸಭೆಗಳನ್ನು ನಿಗಧಿಪಡಿಸಲಾಗಿದ್ದು, ಈ ಸಭೆಗಳಲ್ಲಿ ಶಿಫಾರಸ್ಸುಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಮುಂದಿನ 3 ತಿಂಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಕುರಿತು ಸಭೆಗಳನ್ನು ನಡೆಸಿ ಕಾಲ ಮಿತಿಯನ್ನು ನಿಗದಿಪಡಿಸಲಾಗುವುದು. ಎಂದರು.
ಆಯೋಗವು ನಾಗರಿಕ ಸೇವೆಗಳನ್ನು ಸಂಪರ್ಕರಹಿತ, ಮತ್ತು ನಗದುರಹಿತ ವ್ಯವಸ್ಥೆಯ ಮೂಲಕ ನಿಗದಿತ ಸಮಯಕ್ಕೆ ಪರಿಣಾಮಕಾರಿಯಾಗಿ ಸೇವಾ ವಿತರಣೆಯನ್ನು ಖಚಿತಪಡಿಸುವುದು. ಹಾಗೂ ಜಾರಿಯಲ್ಲಿರುವ ಎಲ್ಲಾ ಸೇವೆಗಳನ್ನು ಎಂಡ್-ಟು-ಎಂಡ್ ಆನ್‌ಲೈನ್ ಸೇವೆಗಳಾಗಿ ಪರಿವರ್ತಿಸುವ ಕುರಿತಂತೆ ಶಿಫಾರಸ್ಸು ಮಾಡಲು ಮತ್ತು ಸಿಬ್ಬಂದಿಯ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಎಲ್ಲಾ ಹಂತಗಳಲ್ಲಿ ಇ-ಆಫೀಸ್ ಸೇವೆಗಳಂತಹ ತಂತ್ರಜ್ಞಾನದ ಬಳಕೆ, ಕಡತಗಳ ತ್ವರಿತ ವಿಲೇವಾರಿಗಾಗಿ ಕಡತ ಚಲನೆಯನ್ನು 3 ಅಥವಾ 4 ಹಂತಕ್ಕೆ ಸರಳೀಕರಿಸಲು ಪರಿಶೀಲನೆ ನಡೆಸುತ್ತಿದೆ ಎಂದರು.
ಮುAಚೂಣಿ ಸೇವಾ ವಿತರಣಾ ಕಚೇರಿಗಳಾದ ಅಟಲ್ ಜೀ ಜನಸ್ನೇಹಿ ಕೇಂದ್ರಗಳು (ಎಜೆಎಸ್‌ಕೆ), ಗ್ರಾಮ ಪಂಚಾಯಿತಿ ರೈತ ಸಂಪರ್ಕ ಕೇಂದ್ರ (ಆರ್.ಎಸ್.ಕೆ), ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಹೆಚ್‌ಸಿ), ಪೊಲೀಸ್ ಠಾಣೆ ಇವೇ ಮೊದಲಾದವುಗಳನ್ನು ಬಲಪಡಿಸುವುದು. ಮತ್ತು ಈ ಕಚೇರಿಗಳಲ್ಲಿ ನಿರ್ಣಾಯಕ ಹುದ್ದೆಗಳನ್ನು ಮತ್ತು ಕ್ಷೇತ್ರ ಮಟ್ಟದಲ್ಲಿ ತಾಂತ್ರಿಕ ಹುದ್ದೆಗಳನ್ನು ಕಾಲಕ್ರಮದಲ್ಲಿ ಭರ್ತಿ ಮಾಡುವ ಕುರಿತಂತೆ ಹಾಗೂ ಆದಾಯದ ಸಂಪನ್ಮೂಲಗಳನ್ನು ಹೆಚ್ಚಿಸುವುದು ಮತ್ತು ಅಗತ್ಯವಿರುವಲ್ಲಿ ಶುಲ್ಕಗಳು, ದಂಡಗಳು, ಇತ್ಯಾದಿಗಳನ್ನು ಪರಿಷ್ಕರಿಸುವ ಬಗ್ಗೆ ಶಿಫಾರಸ್ಸು ಮಾಡಲು ಪರಿಶೀಲನೆ ನಡೆಸಿದೆ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳಿಗೆ ಹೆಚ್ಚಿನ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳ ಪ್ರತ್ಯಾಯೋಜನೆ, ಸೇವಾ ವಿತರಣೆಯನ್ನು ಸುಧಾರಿಸಲು ಖಾಲಿ ಇರುವ ಲಿಪಿಕ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಾಗಿ ಪರಿವರ್ತನೆ, ಕೆಲಸದ ಹೊರೆಯನ್ನು ಪರಿಗಣಿಸಿ ಸಿಬ್ಬಂದಿಯ ಮರು ನಿಯೋಜನೆ (redeployment) ಮಾಡಲು ಹೆಚ್ಚಿನ ಅವಕಾಶಗಳಿದ್ದು, ಕೆಲಸದ ಹೊರೆಯ ಆಧಾರದ ಮೇಲೆ ಸಿಬ್ಬಂದಿಯ ಮರು ನಿಯೋಜನೆ ಮಾಡುವ ಕಾರ್ಯವನ್ನು ತ್ವರಿತಗೊಳಿಸುವುದು. ಹಾಗೂ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳನ್ನು ವಿಲೀನಗೊಳಿಸುವ ಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಅರಣ್ಯ, ಸಾರಿಗೆ, ಗ್ರಾಮೀಣಾಭಿವದ್ದಿ ಮತ್ತು ಪಂಚಾಯತ್ ರಾಜ್, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಕೆ.ಆರ್.ಐ.ಡಿ.ಎಲ್, ನಿರ್ಮಿತಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಇಲಾಖೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕೈಗಾರಿಕೆ, ಪ್ರವಾಸೋದ್ಯಮ, ಹೆಸ್ಕಾಂ, ನಗರ ಸ್ಥಳೀಯ ಸಂಸ್ಥೆಗಳು, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳಿಂದ ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಶಾಸಕರಾದ ಭೀಮಣ್ಣ ನಾಯ್ಕ್, ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಆಡಳಿತ ಸುಧಾರಣಾ ಆಯೋಗದ ಸಲಹೆಗಾರ ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಎಫ್‌ಓ ರವಿಶಂಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top