ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಗು ಗುಂಡಿ, ಕೊಳವೆ ಬಾವಿ ಮರುಪೂರಣ ಘಟಕ, ಸಾಂಪ್ರದಾಯಿಕ ಜಲ ಮೂಲಗಳಾದ ಕೆರೆ – ಕಲ್ಯಾಣಿ ಹೂಳೆತ್ತುವುದು, ಅಮೃತ ಸರೋವರಗಳ ನಿರ್ಮಾಣದಂತಹ ಹತ್ತು ಹಲವು ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಯಶಸ್ಸು ಅಸಾಧ್ಯ. ಆದ್ದರಿಂದ ಸಾರ್ವಜನಿಕರಿಗೆ ನೆಲ – ಜಲ – ಪರಿಸರ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗೋಣ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಹೇಳಿದರು.
ಅವರು ಬುಧವಾರ, ವಿಶ್ವ ಪರಿಸರ ದಿನದ ಅಂಗವಾಗಿ ಕಾರವಾರ ತಾಲೂಕಿನ ಹಣಕೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಟೆಗಾಳಿ ಗ್ರಾಮದಲ್ಲಿನ ಭೀಮ್ಕೋಲ್ ಅಮೃತ ಸರೋವರದ ಉದ್ಯಾನವನದಲ್ಲಿ ಸಸಿ ನೆಟ್ಟು, ನೀರುಣಿಸುವ ಮೂಲಕ ಜಿಲ್ಲೆಯಾದ್ಯಂತ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ಅಮೃತ ಸರೋವರಗಳ ವ್ಯಾಪ್ತಿಯಲ್ಲಿ ಪರಿಸರ ದಿನ ಆಚರಿಸಲು ಮತ್ತು ‘ಸ್ವಚ್ಛ ಹಸಿರು ಗ್ರಾಮ ವಾರ’ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಅಮೃತ ಸರೋವರವನ್ನು ಮನರೇಗಾ ಯೋಜನೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಜೊತೆಗೂಡಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅನಿರ್ಬಂಧಿತ, 15ನೇ ಹಣಕಾಸು ಅನುದಾನದಡಿ ಅಭಿವೃದ್ಧಿಪಡಿಸಲಾಗಿದ್ದು, ಉತ್ತಮ ಯೋಜನೆ ಮತ್ತು ಅನುಷ್ಠಾನದ ಮೂಲಕ ರಾಜ್ಯದಲ್ಲಿಯೇ ಮಾದರಿ ಅಮೃತ ಸರೋವರವಾಗಿ ಹೊರಹೊಮ್ಮಿದೆ. ಬೆಟ್ಟ-ಗುಡ್ಡ, ಹಚ್ಚಹಸಿರಿನ ಕಾನನದ ಮಧ್ಯೆ ಸುಮಾರು 25 ಎಕರೆಯಷ್ಟು ವಿಶಾಲವಾಗಿ ಹರಡಿಕೊಂಡಿರುವ ಈ ಸರೋವರವನ್ನು ಅಭಿವೃದ್ಧಿ ಪಡಿಸಲು ಇನ್ನೂ ಸಾಕಷ್ಟು ಅವಕಾಶಗಳಿದ್ದು, ಹಂತ ಹಂತವಾಗಿ ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
“ಭೀಮಕೋಲ್ದಲ್ಲಿ ವಾಟರ್ ಆಕ್ಟಿವಿಟಿ ಮತ್ತು ಟ್ರೆಕ್ಕಿಂಗ್ !”
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಶಾಲವಾದ ಭೀಮ್ಕೋಲ್ ಸರೋವರದಲ್ಲಿ ಕಯಾಕಿಂಗ್, ಬೋಟಿಂಗ್ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳನ್ನು ಜೊಡಿಸಲು ಮತ್ತು ಸರೋವರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶ, ಬೆಟ್ಟ-ಗುಡ್ಡ, ಜಲಪಾತವನ್ನು ಸಮರ್ಪಕವಾಗಿ ಬಳಸಿಕೊಂಡು ಚಾರಣ ತಾಣವಾಗಿ ರೂಪಿಸಲು ಯೋಜನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಮಂಜುನಾಥ ನಾವಿ, ಕಾರವಾರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಆರ್ಎಫ್ಒ ಕಿರಣ, ತಾ.ಪಂ. ಅಧಿಕಾರಿಗಳು, ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಪಿಡಿಒ, ನರೇಗಾ, ಎನ್ಆರ್ಎಲ್ಎಮ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.