ಸಿದ್ದಾಪುರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಉಳಿದ ಗ್ಯಾರೆಂಟಿಗಳನ್ನು ಕೊಡುವ ಬದಲು ರಾಜ್ಯದ ಮಹಿಳೆಯರ ಸುರಕ್ಷತೆಯ ಗ್ಯಾರೆಂಟಿ ನೀಡಿದರೆ ಉತ್ತಮ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕಠಿಣ ಕ್ರಮಕೈಗೊಂಡಿಲ್ಲ. ಬದಲಾಗಿ ಕೊಲೆಗಾರರ ಮನೆಗೆ ಭದ್ರತೆಯನ್ನು ಒದಗಿಸಿದೆ.ಇದರಿಂದ ಸರ್ಕಾರ ಯಾರ ಓಲೈಕೆಗೆ ನಿಂತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನಾದರೂ ಜನ ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಂದು ಪಾಕಿಸ್ತಾನ ಇಲ್ಲೇ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಮಕ್ಕಳನ್ನು ಕಳೆದುಕೊಂಡಿರುವ ತಾಯಂದಿರ ಶಾಪದಿಂದ ಕಾಂಗ್ರೆಸ್ ದೇಶದಲ್ಲಿ ನಿರ್ನಾಮವಾಗುತ್ತದೆ.
ಸುಳ್ಳು ಭರವಸೆಗಳನ್ನು ನೀಡುವ ಕಾಂಗ್ರೆಸ್ಸಿಗರ ಮಾತಿಗೆ ಮರುಳಾಗದೆ ದೇಶದ ಹಿತದೃಷ್ಟಿಯಿಂದ, ಸುರಕ್ಷತೆಯ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಿ ಮತ್ತು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದರು. ಬಿಜೆಪಿ ಕೇವಲ ಹಿಂದೂಧರ್ಮಕ್ಕೆ ಸೀಮಿತವಾಗಿದೆ ಎಂದು ಅಪಪ್ರಚಾರ ನಡೆಯುತ್ತಿದೆ. ಆದರೆ ಮೋದಿಯವರ ಯೋಜನೆಗಳು ಯಾವುದೇ ಧರ್ಮಕ್ಕೆ, ಜಾತಿಗೆ ಸೀಮಿತವಾಗಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭವನ್ನು ಸಲ್ಲಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲಬೇಕು.
ಗ್ಯಾರೆಂಟಿಗಳ ಹೆಸರಿನಿಂದ ಜನರನ್ನು ಮರಳು ಮಾಡುವ ಅವಶ್ಯಕತೆ ಬಿಜೆಪಿ ಇಲ್ಲ. ಯಾಕೆಂದರೆ ನಮಗೆ ಮೋದಿಯೇ ಗ್ಯಾರಂಟಿ.
ಏ. 28ರಂದು ಮೋದಿಯವರು ಶಿರಸಿಗೆ ಆಗಮಿಸುತ್ತಿದ್ದು, ಬೃಹತ್ ಸಮಾವೇಶವನ್ನುಆಯೋಜಿಸಲಾಗಿದೆ. ಜಿಲ್ಲೆಯ ಜನತೆ ಯಾವುದೇ ಗೊಂದಲ, ಗಲಭೆಗಳಿಗೆ ಆಸ್ಪದ ಮಾಡಿಕೊಡದೆ ಶಾಂತಿಯುತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದಾಪುರ ಮಂಡಲ ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ ಕೆ, ನಿಕಟಪೂರ್ವ ಮಂಡಲಾಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ಶ್ರೀಕಾಂತ ಹೆಗ್ನೂರ್, ಗುರುರಾಜ್ ಶಾನಭಾಗ್, ಎಸ್ ಕೆ ಮೇಸ್ತ, ಸುಮನಾ ಕಾಮತ್, ಚಂದ್ರಕಲಾ ನಾಯ್ಕ, ನಂದನ ಬೋರಕರ್, ಮಂಜುನಾಥ ಭಟ್, ಸುರೇಶ, ಕೃಷ್ಣಮೂರ್ತಿ, ತೋಟಪ್ಪಇದ್ದರು.