ಶಿರಸಿ: ಬಿಜೆಪಿಯ ರಂಗಿತರಂಗ ನಾಟಕವನ್ನು ಮೂರು ದಶಕಗಳಿಂದ ಜಿಲ್ಲೆಯ ಜನರು ಗಮನಿಸಿದ್ದಾರೆ. ಮುಗ್ದತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಸಂಸದರು ಹಾಗೂ ಬಿಜೆಪಿಯ ನಾಯಕರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮುಖಂಡರ ಹೇಳಿಕೆಯಿಂದ ನಮ್ಮ ಪಕ್ಷ ಭ್ರಮನಿರಸನಗೊಳ್ಳುವುದಿಲ್ಲ. ಬಿಜೆಪಿಯ ಸುಳ್ಳು ಹೇಳಿಕೆಗೆ ಮತದಾರರು ಈ ಚುನಾವಣೆಯಲ್ಲಿ ತಿಲಾಂಜಲಿ ಹಾಡಲಿದ್ದಾರೆ. ಚುನಾವಣೆ ಬಂದ ಮೇಲೆ ಅದೇ ರಾಗ ಅದೇ ಹಾಡು ಎಂಬಂತಾಗಿದೆ ಬಿಜೆಪಿಯ ಸ್ಥಿತಿ. ಸೌಹಾರ್ದತೆ ಕೆಡಿಸುವ ಕೆಲಸ ಮಾಡುತ್ತಿದ್ದು, ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸುತ್ತೇವೆ. ಸಂವಿಧಾನದಲ್ಲಿ ಹೇಳಿರುವಂತೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಐಕ್ಯತೆ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕೇವಲ ಚುನಾವಣಾ ಸಂದರ್ಭದಲ್ಲಿ ಅನೇಕ ವಿಚಾರ ಮುನ್ನೆಲೆ ತಂದು ಅದನ್ನೇ ಬಿಜೆಪಿ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತದೆ ಎಂದು ಆರೋಪಿಸಿದರು.
ಭಟ್ಕಳದ ಶಾಸಕ ಡಾ.ಚಿತ್ತರಂಜನ ಹತ್ಯೆ ಸಂದರ್ಭದಲ್ಲಿ ಬಿಜೆಪಿ ಹನಿ ಹನಿ ರಕ್ತಕ್ಕೂ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದ್ದರಲ್ಲದೇ, ಹೊನ್ನಾವರದ ಮೀನುಗಾರ ಕುಟುಂಬದ ಯುವಕ ಪರೇಶ ಮೇಸ್ತ ಪ್ರಕರಣದಲ್ಲಿಯೂ ಇದೇ ಹೇಳಿಕೆ ನೀಡಿದ್ದರು. ಆದರೆ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ರೀತಿ ಘಟನೆಗಳಿಗೆ ನ್ಯಾಯ ಒದಗಿಸದಿರುವುದು ಶೋಚನೀಯ. ಈಗ ಕಾಂಗ್ರೆಸ್ ನಾಯಕರ ಉಡುಗೆ, ತೊಡುಗೆ ಬಗ್ಗೆ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವಾಗಿದ್ದು, ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ ಕೇಸರಿ ಧರಿಸುವುದರಿಂದ ಬಿಜೆಪಿ ಮುಖಂಡರು ಯಾಕೆ ಭಯಪಡುತ್ತಿದ್ದಾರೆ. ಉಡುಗೆ ಬಗ್ಗೆ ವಿಚಾರ ಮಾಡದೇ, ಕೇಂದ್ರ ಸರ್ಕಾರದ ಅಭಿವೃದ್ಧಿ ವಿಚಾರದ ಬಗ್ಗೆ ಹೆಚ್ಚು ಗಮನವಹಿಸುವುದು ಒಳಿತು ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯ ನಂತರ ಚುನಾವಣಾ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾಮ ನಿರ್ದೇಶನದ ಮೂಲಕ ಅಧಿಕಾರಗಳಿಸಿಲ್ಲ. ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿಗೆ ವಾರಂಟಿ ನೀಡಿದ್ದೇವೆ. ಮನಮೋಹನ ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿವಅಧಿಕಾರದಲ್ಲಿದ್ದ ವೇಳೆ ನರೇಗಾ, ಮಾಹಿತಿ ಹಕ್ಕು, ಆಧಾರ್, 72 ಸಾವಿರ ಕೋಟಿ ರೈತರ ಸಾಲಮನ್ನಾ, ವಿದೇಶಿ ಹೂಡಿಕೆ ಮಾಡಿರುವುದು ಯುಪಿಎ ಸರ್ಕಾರದ ಸಾಧನೆ ಎಂದ ಅವರು, ದೇಶದ ಜಿಡಿಪಿ ದರ ಕುಸಿಯಲು ಪ್ರಧಾನಿ ಮೋದಿ ಕಾರಣ. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ವಿಚಾರವನ್ನು ಬಿಜೆಪಿಗರು ಮೆಲುಕು ಹಾಕಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ ಅವರು, ನಮ್ಮ ತೆರಿಗೆ ನಮ್ಮ ಹಕ್ಕನ್ನು ಕೇಳಿದ್ದೇವೆ. ಆಗ ಯಾಕೆ ಬಿಜೆಪಿ ಮುಖಂಡರಿಗೆ ಎಚ್ಚರವಾಗಿಲ್ಲ. ರಾಷ್ಟ್ರೀಯತೆ, ರಾಷ್ಟ್ರೀಯ ವಿಚಾರ ನಾವು ಪ್ರತಿಪಾದಿಸುತ್ತೇವೆ. ಅಂಕೋಲಾ-ಹುಬ್ಬಳ್ಳಿ ರೈಲ್ವೇ ಮಾರ್ಗ ಅನುಷ್ಠಾನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಯಾಕೆ ಪೂರ್ಣಗೊಂಡಿಲ್ಲ. ವಿಮಾನ ನಿಲ್ದಾಣ ಯಾಕೆ ಆಗಿಲ್ಲ ಎಂಬುದನ್ನು ವಿಚಾರ ಮಾಡಿ, ಜನರ ಬಳಿ ತೆರಳಿ ಮತ ಕೇಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಬಸವರಾಜ ದೊಡ್ಮನಿ, ಬಾಳಾ ರೇವಣಕರ, ರಘು ಕಾನಡೆ, ಶ್ರೀಪಾದ ಹೆಗಡೆ ಕಡವೆ, ಜ್ಯೋತಿ ಪಾಟೀಲ ಮತ್ತಿತರರು ಇದ್ದರು.