ಯಲ್ಲಾಪುರ: ಕ್ಷೇತ್ರದ ಶಾಸಕ ಹೆಬ್ಬಾರರು ನನ್ನ ಬಗ್ಗೆ ಟೀಕೆ ಮಾಡುತ್ತಾ, ನಮ್ಮ ಶಿಕ್ಷಣ ಸಂಸ್ಥೆಯ ಕುರಿತು ಸಲ್ಲದ ಆರೋಪ ಮಾಡಿದ್ದಾರೆ. ಅವರ ಆರೋಪ ಮತ್ತು ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಈ ಮೂಲಕ ಘಂಟಾಘೋಷವಾಗಿ ಹೇಳುತ್ತೇನೆ ಮತ್ತು ನನ್ನ ಬಗೆಗಿನ ರಾಜಕೀಯ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಉತ್ತರ ಕೊಡುತ್ತೇನೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ, ಭಾಜಪಾ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯಲ್ಲಾಪುರದ ನಮ್ಮ ಶಿಕ್ಷಣ ಸಂಸ್ಥೆಯು ಇಡೀ ಜಿಲ್ಲೆಯಲ್ಲೇ ಒಂದು ಮಾದರಿ ಸಂಸ್ಥೆಯಾಗಿ ಹೊರ ಹೊಮ್ಮುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಗುಣಮಟ್ಟದ ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ,ಅನ್ಯ ಜಿಲ್ಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇರುವಾಗ
ಪ್ರೀ-ಕೆಜಿ ಯಿಂದ ಪ್ರಾರಂಭಿಸಿ ಪತ್ರಿಕೋಧ್ಯಮ, ಬಿಸಿಎ, ಬಿ.ಎಡ್.ವರೆಗಿನ ಉನ್ನತ ಶಿಕ್ಷಣವನ್ನು ನಮ್ಮ ತಾಲೂಕಿನಲ್ಲಿಯೇ ಸಿಗುವಂತೆ ಮಾಡಿದ ಹೆಮ್ಮೆ ನಮ್ಮ ವಿಶ್ವದರ್ಶನ ಶಿಕ್ಷಣ ಸಂಸ್ಥೆಯದ್ದು.
ಪಿಯುಸಿ ವಿಭಾಗ ಮಾದರಿ:
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಡಳಿತವನ್ನು ನಾವು ವಹಿಸಿಕೊಂಡ ನಂತರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ, ಈ ಹಿಂದೆ ಮುಚ್ಚಿಹೋಗಿದ್ದ ಪಿಯು ಕಾಲೇಜನ್ನು ಪುನರಾರಂಭಿಸಿ ಮೊದಲ ಬ್ಯಾಚ್ ನಲ್ಲಿಯೇ ಉತ್ತಮ ಫಲಿತಾಂಶ ನೀಡಿರುವುದು ನಿಮಗೆ ತಿಳಿದಿರಲು ಸಾಕು.
ಸರಕಾರಿ ಅನುದಾನಿತ ಪಿಯು ಕಾಲೇಜಿಗಿಂತ ಕಡಿಮೆ ಶುಲ್ಕ ಪಡೆದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಶಿಕ್ಷಣ ನೀಡುವುದಲ್ಲದೇ ಯಲ್ಲಾಪುರದಲ್ಲೇ ಸಿಇಟಿ, ನೀಟ್ , ಸಿಎ ಫೌಂಡೇಶನ್ ತರಬೇತಿಯನ್ನು ಮತ್ತು ಕಂಪ್ಯೂಟರ್ ಶಿಕ್ಷಣವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಕಳೆದ ವರ್ಷ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಲಕ್ಷಕ್ಕೂ ಅಧಿಕ ಶುಲ್ಕ ವಿನಾಯಿತಿಯನ್ನು ಪಿಯು ವಿಭಾಗಕ್ಕೆ ನೀಡಿ ಅವರು ವಿದ್ಯಾರ್ಜನೆ ಪಡೆಯಲು ನೆರವಾಗುತ್ತಿದ್ದೇವೆ.
ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ತಾಲೂಕಿನ ಬೇರೆ ಬೇರೆ ಹೈಸ್ಕೂಲ್ ನಲ್ಲಿ ಮತ್ತು ಪಿಯು ಕಾಲೇಜಿನಲ್ಲಿ ಓದುತ್ತಿರುವ sslc ಮತ್ತು puc ಎರಡನೇ ವರ್ಷದ ಮಕ್ಕಳಿಗೆ ಉಚಿತ ಪರೀಕ್ಷಾ ತರಬೇತಿಯನ್ನು ನಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷ ಉಚಿತವಾಗಿ ನೀಡುತ್ತಿದ್ದೇವೆ. ಈ ಮಾಹಿತಿ ಮಾನ್ಯ ಶಾಸಕರಿಗೆ ಇದ್ದಹಾಗೆ ತೋರುತ್ತಿಲ್ಲ ಎಂದರು.
CBSE ಹೊಸ ಅವಕಾಶ:
ತಾಲೂಕಿನಲ್ಲಿಯೇ ಪ್ರಥಮವಾಗಿ ಕೇಂದ್ರಿಯ ಪಠ್ಯಕ್ರಮ (ಸಿ ಬಿ ಎಸ್ ಸಿ ) ಶಾಲೆ ಪ್ರಾರಂಭಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದಾಗಿದೆ . ಗ್ರಾಮೀಣದ ಬಡ ಮಕ್ಕಳಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ಸಿ.ಬಿ.ಎಸ್.ಸಿ. ನಿಯಮಾವಳಿಗಿಂತ ಕಡಿಮೆ ಶುಲ್ಕ ತೆಗೆದುಕೊಂಡು ಸಂಸ್ಥೆಯೇ ಬಾಕಿ ಶುಲ್ಕ ಭರಿಸಿಕೊಂಡು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ವಿಶೇಷವೆಂದರೆ ಕಳೆದ ವರ್ಷ ಅದರಲ್ಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ 10 ಲಕ್ಷಕ್ಕೂ ಅಧಿಕ ಶುಲ್ಕ ವಿನಾಯಿತಿ ನೀಡಲಾಗಿದೆ. ಪರಿಣಾಮ ಈ ಮುಂಚೆ ನೂರರ ಸಂಖ್ಯೆಯಲ್ಲಿದ್ದ ಮಕ್ಕಳ ನೋಂದಣಿ ಇದೀಗ ಸಾವಿರಕ್ಕೆ ತಕುಪಿದೆ. ಆ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಸಿಬಿಎಸ್‌ಸಿ ಮಾದರಿ ವಿದ್ಯಾರ್ಜನೆಗೆ ಹೊಸ ಅವಕಾಶವನ್ನು ಪರಿಶ್ರಮದಿಂದ ಕಲ್ಪಿಸಲಾಗಿದೇ.
ಇನ್ನು ಬಿಸಿಎಯಂತಹ ಪದವಿ ಶಿಕ್ಷಣವನ್ನು ಯಲ್ಲಾಪುರದಲ್ಲೇ ಅತೀ ಕಡಿಮೆ ಶುಲ್ಕದಲ್ಲಿ ನೀಡಲಾಗುತ್ತಿದ್ದು ಇಂತಹ ಕೋರ್ಸ್ ಗಳಿಗೆ ವಿಧ್ಯಾರ್ಥಿಗಳು ಅನ್ಯ ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸಲಾಗಿದೆ.
ಬಿಎಡ್ ನಮ್ಮ ಹೆಮ್ಮೆ:
ಇಡೀ ರಾಜ್ಯದಲ್ಲಿಯೇ ಅತೀ ಕಡಿಮೆ ಶುಲ್ಕದಲ್ಲಿ ಅತ್ಯಂತ ಗುಣಮಟ್ಟದ ಬಿ.ಎಡ್. ಶಿಕ್ಷಣನೀಡಲಾಗುತ್ತಿದ್ದು ಇಡೀ ಜಿಲ್ಲೆಯಲ್ಲಿಯೇ ಇರುವ ಕೆಲವೇ ಬಿ.ಎಡ್. ಕಾಲೇಜುಗಳಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಪ್ರಸ್ತುತ ಪ್ರತಿ ವರ್ಷ 200 ಪ್ರಶಿಕ್ಷಣಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಈ ಹಿಂದೆ ನಮ್ಮಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜ್ಯದ ವಿವಿಧ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವದರ್ಶನ ಬಿ.ಎಡ್. ಕಾಲೇಜಿನಲ್ಲಿ ಕಲಿತ ಶಿಕ್ಷಕರಿಗೆ ಎಲ್ಲ ಸಂಸ್ಥೆಗಳಿಂದ ವಿಶೇಷ ಬೇಡಿಕೆ ಇರುವುದು ತಿಳಿದಿರಬೇಕಾದ ಸಂಗತಿ.
ಗುಣಮಟ್ಟದ ನರ್ಸಿಂಗ್ ಸ್ಕೂಲ್:
ಅಂಕೋಲದಲ್ಲಿ ನರ್ಸಿಂಗ್ ಕಾಲೇಜ್ ನಡೆಸುತ್ತಿದ್ದು,ಪ್ರತಿ ವರ್ಷ 150 ವಿದ್ಯಾರ್ಥಿಗಳು ರಾಜ್ಯದಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಉತ್ತಮ ನರ್ಸಿಂಗ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ನಮ್ಮಲ್ಲಿ ಕಲಿತ ನರ್ಸಿಂಗ್ ವೃತ್ತಿಪರರಿಗೆ ವಿವಿಧ ರಾಜ್ಯದ ಒಳಗೆ ಮತ್ತು ರಾಜ್ಯದ ಹೊರಗೆ ವಿಶೇಷ ಬೇಡಿಕೆ ಇದ್ದು, ವಿವಿಧ ಆಸ್ಪತ್ರೆಗಳಲ್ಲಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ.
ಪತ್ರಿಕೋದ್ಯಮ ಹೊಸ ಪ್ರಯೋಗ:
ಪತ್ರಿಕೋಧ್ಯಮದಂತಹ ಕೋರ್ಸ್ ಗಳಿಗಾಗಿ ಮಹಾನಗರಗಳಿಗೆ ತೆರಳ ಬೇಕಾದ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿ ಯಲ್ಲಾಪುರದಲ್ಲಿ ಪ್ರಪ್ರಥಮವಾಗಿ ಪತ್ರಿಕೋಧ್ಯಮ ಕಾಲೇಜು ಪ್ರಾರಂಭ ಮಾಡಿದ್ದೇವೆ. ಆ ಮೂಲಕ ಅತೀ ಕಡಿಮೆ ಶುಲ್ಕದಲ್ಲಿ ಪ್ರಿಂಟ್,ಡಿಜಿಟಲ್, ಟೀವಿ,ರೇಡಿಯೋ, ಪತ್ರಿಕೋದ್ಯಮದ ಜೊತೆಗೆ ಪಿ.ಆರ್ ವೃತ್ತಿಪರರಾಗುವವರಿಗೆ ಶಿಕ್ಷಣ ತರಬೇತಿ ನೀಡಲಾಗುತ್ತಿದೆ.
ಪತ್ರಿಕೋದ್ಯಮ ಕಾಲೇಜಿಗೆ ನಾಡಿನ ಹೆಮ್ಮೆಯ ಖ್ಯಾತ ಉದ್ಯಮಿ/ಪತ್ರಿಕೋದ್ಯಮಿಯಾಗಿರುವ ಡಾ.ವಿಜಯ ಸಂಕೇಶ್ವರ ಅವರ ಹೆಸರಿಡಲಾಗಿದ್ದು ಅವರ ಸಹಕಾರದಿಂದ ಪತ್ರಿಕೋಧ್ಯಮ ಕಾಲೇಜು ಯಶಸ್ವಿಯಾಗಿ ನಡೆಯುತ್ತಿದೆ.
ನಮ್ಮೂರಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ:
ವಿಶ್ವದರ್ಶನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನೂ ಸ್ಥಾಪಿಸಿದ್ದು ಎಂಟನೇ ತರಗತಿ ಯಿಂದಲೇ ಐ ಎ ಎಸ್ , ಕೆ ಎ ಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಯನ್ನು ನೀಡಲಾಗುತ್ತಿದೆ. ಸಣ್ಣವಯಸ್ಸಿನಲ್ಲಿಯೇ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುತ್ತಿರುವ ಹೆಮ್ಮೆ ನಮಗಿದೆ.
ಬಡ ಮಕ್ಕಳಿಗೆ ಮೊದಲ ಆದ್ಯತೆ:
ಇದರ ಜೊತೆಗೆ ನಮ್ಮ ಸಂಸ್ಥೆಯ ವತಿಯಿಂದ ಎರಡು ಅನುದಾನಿತ ಕನ್ನಡ ಮಾಧ್ಯಮದ ಪ್ರೌಢಶಾಲೆಗಳು ನಡೆಯುತ್ತಿದ್ದು ಇಡಗುಂದಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವಿಧ ಹಳ್ಳಿಗಳಿಂದ ಬರುವ ಬಡ ಮಕ್ಕಳ ಅನುಕೂಲಕ್ಕಾಗಿ 120 ಮಕ್ಕಳ ಸರ್ಕಾರಿ ಶುಲ್ಕವನ್ನು, ಅವರ ಬಸ್ ಪಾಸ್ ಶುಲ್ಕವನ್ನು ಮತ್ತು ಯೂನಿಫಾರ್ಮ್ ಶುಲ್ಕವನ್ನು ನಮ್ಮ ಸಂಸ್ಥೆಯೇ ಭರಿಸುತ್ತಿದೆ, ಈ ಉದ್ದೇಶಗಳಿಗೆ ವರ್ಷಕ್ಕೆ ಆರು ಲಕ್ಷಕ್ಕಿಂತ ಹೆಚ್ಚು ಹಣವನ್ನು ಸಂಸ್ಥೆ ಬಡ ಮಕ್ಕಳ ಕಲಿಕೆಗೆ ವಿನಿಯೋಗಿಸುತ್ತಿದೆ.
ಅಂತರಾಷ್ಟ್ರೀಯ ಗುಣಮಟ್ಟದ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನೂ ಈ ವರ್ಷದಿಂದ ಮಾಡಲಾಗಿದೆ.
ಇದು ಬಡವರಿಗೆ ಸ್ಪಂದನೆಯಲ್ಲವೇ?
ಹೀಗೆ ಅತ್ಯುತ್ತಮ ಶಿಕ್ಷಣವನ್ನು ಶುಲ್ಕವಿಲ್ಲದೆ ಮತ್ತು ಅತೀ ಕಡಿಮೆ ಶುಲ್ಕದಲ್ಲಿ ಉತ್ತಮ ಮೂಲಸೌಕರ್ಯಗಳೊಂದಿಗೆ ನೀಡಲಾಗುತ್ತಿದ್ದು, ಗ್ರಾಮೀಣ ಬಡ ಮಕ್ಕಳಿಗೆ ಬಸ್ ಸೇವೆ ಮತ್ತು ಗುಣಮಟ್ಟದ ಪೌಷ್ಠಿಕ ಊತೋಪಚಾರ ಮಾಡುತ್ತಿರುವ ಹೆಮ್ಮೆ, ಖುಷಿ ನಮಗಿದೆ.
ಇಷ್ಟೆಲ್ಲ ವಿಭಾಗದ ಶಿಕ್ಷಣಗಳು ನಮ್ಮ ಸಂಸ್ಥೆಯಲ್ಲಿ ದೊರಕುತ್ತಿದ್ದು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ದೊರಕುವುದರಿಂದ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಪ್ರವೇಶ ಬಯಸಿ ಬರುತ್ತಿದ್ದಾರೆ. ಯಾವುದೇ ವಿಭಾಗದಲ್ಲೂ ಶೈಕ್ಷಣಿಕ ಶುಲ್ಕದ ಹೊರತಾಗಿ ಯಾವುದೇ ತೆರನಾದ ಅನಗತ್ಯವಾಗಿ ಅಥವಾ ಅನಧೀಕೃತವಾಗಿ ಶುಲ್ಕ ಪಡೆಯುತ್ತಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಮತ್ತು ನಾವು ಬಡವರ ಕಷ್ಟಕ್ಕೆ ಸಪಂದಿಸುತ್ತಿಲ್ಲ ಎಂಬ ಆರೋಪವು ಹುರುಳಿಲ್ಲದ್ದು ಎಂಬುದು ನಿರೂಪಿತವಾಗುತ್ತದೆ.
ಸ್ಥಳೀಯರಿಗೆ ಉದ್ಯೋಗ:
ನಮ್ಮ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗಗಳಲ್ಲಿ ಸೇರಿ ಒಟ್ಟಾರೆ 90 ಕ್ಕೂ ಹೆಚ್ಚು ಅಧ್ಯಾಪಕ,ಭೋದಕ ವರ್ಗದ ಮತ್ತು 25 ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿಗಳು ಉದ್ಯೋಗ ಮಾಡುತ್ತಿದ್ದಾರೆ. ಜಿಲ್ಲೆಯ ನಾನಾ ಭಾಗದವರು ಮತ್ತು ಸ್ಥಳೀಯರಿಗೆ ಸಂಸ್ಥೆ ಉದ್ಯೋಗ ನೀಡಿದ್ದು ಹೆಚ್ಚಿನವರು ಸ್ವಂತ ಊರಿನಲ್ಲಿಯೇ ನಮ್ಮ ಸಂಸ್ಥೆಯ ಮೂಲಕ ಉದ್ಯೋಗ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ.
ಸೇವೆಯೆಂಬ ಯಜ್ಞದಲ್ಲಿ :
ಇದು ನಮ್ಮ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾದರೆ ಇನ್ನೊಂದೆಡೆ ವಿಶ್ವದರ್ಶನ ಸೇವಾ ಸಂಸ್ಥೆಯ ಮೂಲಕ ಬಡವರಿಗೆ ಉಚಿತ ಆಂಬುಲೆನ್ಸ್ ಸೇವೆ, ಆರೋಗ್ಯ, ಶಿಕ್ಷಣ ಸೇವೆ ಹಾಗೂ ಉತ್ತಮ ಮೂಲಸೌಕರ್ಯದ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ತಗುಲುವ ವೆಚ್ಚ ಭರಿಸಲು ಸಹೃದಯ ದಾನಿಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಆ ಬಗ್ಗೆ ಪಾರದರ್ಶಕ ಲೆಕ್ಕಪತ್ರವನ್ನು ಕ್ವಾಲಿಫೈಡ್ ಸಿ.ಎ. ಗಳೇ ನಿರ್ವಹಿಸುತ್ತಿದ್ದಾರೆ.
ಹಾಗೂ ವಿಶ್ವದರ್ಶನ ಸೇವಾ ಸಂಸ್ಥೆಯ ಮೂಲಕ ಈ ಹಿಂದೆ ಮಹಾ ಮಳೆಯಿಂದಾಗಿ ಯಲ್ಲಾಪುರದ ಕಳಚೆ, ಕಲ್ಲೇಶ‍್ವರ ಭಾಗದಲ್ಲಿ ತೀವ್ರ ಹಾನಿಯುಂಟಾದ ಸಂದರ್ಭದಲ್ಲಿ ಅಲ್ಲಿಯ ಜನರ ಜೊತೆ ನಿಂತು ಈ ತುರ್ತು ಸಂದರ್ಭದಲ್ಲಿ ಬೇಕಾದ ಎಲ್ಲ ವೈದ್ಯಕೀಯ ನೆರವು, ಆಹಾರಪೂರೈಕೆ, ವಾಹನ ವ್ಯವಸ್ಥೆ ಇತ್ಯಾದಿ ನೆರವುಗಳನ್ನು ನೀಡಿದ್ದು , ಆ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದ ಹಿಟಾಚಿ, ಜೆಸಿಬಿ ಉಚಿತವಾಗಿ ನೀಡಿದ್ದೇವೆ. ಈ ಕಾರ್ಯದಲ್ಲಿ ನಮ್ಮ ಸಂಸ್ಥೆಯ ಸಿಬ್ಬಂದಿಗಳು, ಸ್ವಯಂಸೇವಕರು ಹಗಲಿರುಳು ಶ್ರಮಿಸಿರುವುದನ್ನು ಸಮಾಜ ಗುರುತಿಸಿದೆ, ಇಷ್ಟೇ ಅಲ್ಲದೆ ಪ್ರಿ ಕೆಜಿಯಿಂದಲೇ ನಾಲ್ಕು ಭಾಷೆಗಳಲ್ಲಿ ಸಂಸ್ಕಾರ ಯುತ ಶಿಕ್ಷಣ ನೀಡುತ್ತಿರುವ ಬಗ್ಗೆ ಇಡೀ ತಾಲ್ಲೂಕಿನ ಶಿಕ್ಷಣ ಪ್ರೇಮಿಗಳಲಿ ಮತ್ತು ಪ್ರಜ್ಞಾವಂತರಲ್ಲಿ ಹೆಮ್ಮೆ ಮತ್ತು ಅಭಿಮಾನವಿದೆ. ಇದಕ್ಕೆ ನನಗೆ ಶಕ್ತಿ ತುಂಬಿದವರು ನಮ್ಮ ಜೊತೆ ನಿರಂತರವಾಗಿ ನಮ್ಮ ಆಸೆಗೆ ಒತ್ತಾಸೆಯಾಗಿ ನಿಂತ ನಮ್ಮ ದೇವದುರ್ಲಭ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು,ಪಾಲಕರು,ನಲ್ಮೆಯ ವಿದ್ಯಾರ್ಥಿಗಳು,ಹಿತೈಷಿಗಳು,ಉದಾರ ದಾನಿಗಳುಒತ್ತಾಸೆ,ಸಹಕಾರದಿಂದಾಗಿ ಇದೆಲ್ಲ ಸಾಧ್ಯವಾಗಿದೆ. ಈ ಎಲ್ಲ ಮಿಥ್ಯಾರೋಪಗಳ ಹೊರತಾಗಿಯೂ ನಮ್ಮಶಿಕ್ಷಣ ಸಂಸ್ಥೆಯ ಎಲ್ಲ ತೆರನಾದ ಜನಪರ ಸೇವೆ ನಿರಾತಂಕವಾಗಿ ಮುಂದುವರೆಯುತ್ತದೆ ಎಂಬ ಭರವಸೆಯನ್ನು ಖಚಿತವಾಗಿ ಕೊಡುತ್ತೇನೆ ಎಂದು ಅವರು ತಿಳಿಸಿದ್ದಾರೆ.