ಜೋಯಿಡಾ: ಬಿಜೆಪಿಗರು 30 ವರ್ಷಗಳಿಂದ ಸುಳ್ಳು ಹೇಳುತ್ತಾ, ಭ್ರಷ್ಟಾಚಾರ ಮಾಡುತ್ತಾ ಅಧಿಕಾರ ಮಾಡಿದರು. ಅವರ ಸುಳ್ಳು ಈಗ ಜನರಿಗೆ ಗೊತ್ತಾಗಿದೆ. ಸುಳ್ಳು ಬಿಟ್ಟರೆ ಅವರು ಬೇರೇನೂ ಮಾಡಿಲ್ಲ. ಬಿಜೆಪಿ ಪಕ್ಷದಿಂದ ಸಾಮಾನ್ಯ ಜನರಿಗೆ ಒಂದೇ ಒಂದು ಪ್ರಯೋಜನಕಾರಿ ಕೆಲಸ ಆಗಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಗ್ಯಾರಂಟಿಯನ್ನು ಜನರಿಗೆ ತಲುಪಿಸಿದೆ. ಬಿಜೆಪಿಗರು ಚುನಾವಣೆಗಾಗಿ ಮತ್ತೆ ಸುಳ್ಳು ಹೇಳಿಕೊಂಡು ಬರುತ್ತಾರೆ. ಜನ ಅವರನ್ನು ನಂಬಬಾರದು. ನಾವೆಲ್ಲರೂ ಸೇರಿ ಈ ಬಾರಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಸಂಸತ್ಗೆ ಕಳುಹಿಸೋಣ. ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಸಂಸತ್ನಲ್ಲಿ ಅಗತ್ಯ ತಿದ್ದುಪಡಿಗೆ ಅವರು ಶ್ರಮಿಸಲಿದ್ದಾರೆ. ಅರಣ್ಯ ಅತಿಕ್ರಮಣ ಸಕ್ರಮಾತಿ ಕೂಡ ನಮ್ಮ ಮತ್ತೊಂದು ಗ್ಯಾರಂಟಿ ಎಂದು ಘೋಷಿಸಿದರು.
ಅವರು ಜೋಯಿಡಾದ ಗಣೇಶಗುಡಿಯಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಕಾರ್ಯಕರ್ತರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಮಾತನಾಡಿ 2014 ರಿಂದ ಬಿಜೆಪಿಗರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆಂದು ಹೇಳಿ ಅದಕ್ಕಾಗಿ ಝೀರೋ ಖಾತೆ ಮಾಡಿಸಿದರು. ಆದ್ರೆ ಹಣ ಮಾತ್ರ ಈವರೆಗೆ ಜಮೆ ಆಗಲೇ ಇಲ್ಲ.ಕೊನೆಪಕ್ಷ ಎಲ್ಲಾದರೂ ಓರ್ವ ಬಿಜೆಪಿಗನ ಖಾತೆಗೆ ಹಣ ಬಂದಿದ್ದರೆ ಹೇಳಿ, ನಾವೆಲ್ಲರೂ ರಾಜೀನಾಮೆ ಕೊಡುತ್ತೇವೆ ಎಂದು ಸವಾಲೆಸೆದರು. ಸಿಲಿಂಡರ್ ಬೆಲೆ 400 ರೂ ಇದ್ದಾಗ ಬಿಜೆಪಿಯ ಸ್ಮೃತಿ ಇರಾನಿ ಸಿಲಿಂಡರ್ ಹಿಡಿದು ರಸ್ತೆಗೆ ಇಳಿಯುತ್ತಿದ್ದರು. ಈಗ ಸಾವಿರ ದಾಟಿದೆ, ಆದರೆ ಅವರೆಲ್ಲ ಮೌನವಾಗಿದ್ದಾರೆ. ಹೀಗಾಗಿ ನಾವು ಮಾತನಾಡಬೇಕಿದೆ, ಅದಕ್ಕಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ಮೂಲಕ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಮಾತನಾಡಿ, ಜೊಯಿಡಾದಲ್ಲಿ ಕುಣಬಿ ಸಮಾಜದವರ ಸಂಖ್ಯೆ ಹೆಚ್ಚಿದೆ. ಗೋವಾ ರಾಜ್ಯದ ಕುಣಬಿಗಳು ಪರಿಶಿಷ್ಟ ಪಂಗಡದಲ್ಲಿದ್ದಾರೆ. ಜೊಯಿಡಾದ ಕುಣಬಿಗಳೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಎಲ್ಲಾ ಕ್ಷೇತ್ರದಿಂದಲೂ ಹಿಂದುಳಿದಿದ್ದಾರೆ. ಹೀಗಾಗಿ ಇಲ್ಲಿಯ ಕುಣಬಿಗಳನ್ನೂ ಪ.ಪಂಗಡಕ್ಕೆ ಸೇರಿಸಬೇಕಂಬ ಪ್ರಯತ್ನಗಳು ನಡೆದಿವೆ. ಆದರೆ ಈ ಪ್ರಕ್ರಿಯೆ ಅಂತಿಮ ಹಂತದಲ್ಲಿ ಭಾರತ ಸರ್ಕಾರದಲ್ಲಿದೆ. ಕಾಂಗ್ರೆಸ್ ಬಡವರ, ಕೂಲಿಕಾರರ ಪಕ್ಷ. ಕುಣಬಿಗಳ ಅಭ್ಯುದಯಕ್ಕಾಗಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ನಾವೆಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ರಾಜ್ಯ ಕಿಸಾನ್ ಮೋರ್ಚಾ ಅಧ್ಯಕ್ಷ ರವಿ ರೇಡ್ಕರ್, ಮಾಜಿ ಜಿ.ಪಂ.ಸದಸ್ಯರುಗಳಾದ ರಮೇಶ್ ನಾಯ್ಕ, ಸಂಜಯ್ ಹಣಬರ, ಕೆಪಿಸಿಸಿ ಸದಸ್ಯರಾದ ಸದಾನಂದ ದಬಗಾರ ಮುಂತಾದವರಿದ್ದರು.