ಕಾರವಾರ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಯಾವುದೇ ಸ್ಟ್ಯಾಂಡರ್ಡ್ ಕಂಡುಬರುತ್ತಿಲ್ಲ.ಇದರಿಂದಾಗಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಸಾವಿಗೀಡಾಗುತ್ತಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ತೀವ್ರ ಕಳವಳ ವ್ಯಕ್ತಪಡಿಸಿದರು
ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ. ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ದಾರಿ ದೀಪ ಅಳವಡಿಸುವ ಕುರಿತಂತೆ ಹಲವು ಬಾರಿ ಸೂಚನೆಗಳನ್ನು ನೀಡಿದ್ದರೂ ಸಹ ಯಾವುದೇ ಪ್ರಗತಿ ಕಂಡು ಬರುವುದಿಲ್ಲ. ಹಲವು ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಈ ಎಲ್ಲಾ ಅನಾಹುತಗಳಿಗೆ ನೀವೇ ಜವಾಬ್ದಾರರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಲ್ಲಿ ಸರಿಯಾದ ಸ್ಟ್ಯಾಂಡರ್ಡ್‌ನ್ನು ಪಾಲನೆ ಮಾಡುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಚಿವರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಸುಮಾರು 1000 ಕೋಟಿ ರೂ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ ಆದರೆ ಈ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಈ ಎಲ್ಲಾ ಕಾಮಗಾರಿ ಗಳ ಪ್ರಗತಿ ಬಗ್ಗೆ 15 ದಿನಗಳಿಗೊಮ್ಮೆ ಸಭೆ ನಡೆಸಿ, ನಿಗದಿತ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ 24 ಗಂಟೆ ನಿರಂತರ ವಿದ್ಯುತ್ ಒದಗಿಸಬೇಕು. ಇಡೀ ರಾಜ್ಯಕ್ಕೆ ಅಗತ್ಯವಿರುವ ಶೇ.22 ರಷ್ಟು ವಿದ್ಯುತ್ ನಮ್ಮ ಜಿಲ್ಲೆಯಿಂದ ಸರಬರಾಜು ಆಗುತ್ತಿದ್ದು ಜಿಲ್ಲೆಗೆ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಆಯೋಜಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಸಚಿವರು, ಗ್ಯಾರಂಟಿ ಯೋಜನೆಗಳು ತಲುಪಿರುವ ಮತ್ತು ತಲುಪದೇ ಇರುವವರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದರು. ಆರ್.ಟಿ.ಓ ಕಛೇರಿಯಿಂದ ಚಾಲನಾ ಪರೀಕ್ಷೆ ನಡೆಸಲು ಸೂಕ್ತ ಸ್ಥಳ ಗುರುತಿಸುವ ಕುರಿತಂತೆ ತಹಸೀಲ್ದಾರ್ ಜೊತೆ ಚರ್ಚಿಸಿ ಸ್ಥಳ ನಿಗದಿಪಡಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಂಗನ ಖಾಯಿಲೆಯ 57 ಪ್ರಕರಣಗಳು ವರದಿಯಾಗಿದ್ದು ಒಟ್ಟು 5 ಸಾವು ಸಂಭವಿಸಿವೆ. ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವು ದೊರಕಿಸುವಂತೆ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಕ್ರಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕಾತಿ ಕುರಿತಂತೆ ವಿಳಂಬ ಧೋರಣೆ ಮಾಡಬೇಡಿ. ತಕ್ಷಣದಲ್ಲಿ ತಜ್ಞ ವೈದ್ಯರ ಸೇವೆ ರೋಗಿಗಳಿಗೆ ದೊರೆಯುವಂತೆ ನೋಡಿಕೊಳ್ಳಿ ಎಂದರು.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಬಾರಿ ಜಿಲ್ಲೆಯು ರಾಜ್ಯದಲ್ಲಿ ಕನಿಷ್ಠ 3 ನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲಿನ ಕುಡಿಯುವ ನೀರು ಕಾಮಗಾರಿಗಳನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸಿ , ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ನೀಡುವ ವಿವಿಧ ಪರಿಹಾರ ಯೋಜನೆಗಳ ಮೊತ್ತವನ್ನು ಹೆಚ್ಜಿಸಲಾಗಿದ್ದು, ಪರಿಷ್ಕ್ರತ ಮೊತ್ತವನ್ನು ಫಲಾನುಭವಿಗಳಿಗೆ ನೀಡುವ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಯಾವುದೇ ಅರ್ಜಿಗಳ ವಿಳಂಬ ವಿಲೇವಾರಿಗೆ ಆಸ್ಪದ ನೀಡಬೇಡಿ ಎಂದರು.
ಮಂಜಗುಣಿ- ಗಂಗಾವಳಿ ಸೇತುವೆ ನಿರ್ಮಾಣ ಕುರಿತಂತೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು , ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿರುವ ಕಸದ ಸಮಸ್ಯೆಯ ಸಮರ್ಪಕ ನಿವಾರಣೆ ಕುರಿತಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕನಿಷ್ಠ 5 ಎಕ್ರೆ ಪ್ರದೇಶವನ್ನು ಗುರುತಿಸಿ, ಅಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡುವ ಮೂಲಕ ತಾಲೂಕಿನ ಗ್ರಾಮಗಳ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ನಿರ್ವಹಣೆಯ ಉಚಿತ ಸಹಾಯವಾಣಿ ಸಂಖ್ಯೆ 8277237100 ನ್ನು ಮತ್ತು ಪಂಚತAತ್ರ ಪೋರ್ಟಲ್ ಸೇವೆಯ ಬಿತ್ತಿಪತ್ರವನ್ನು ಬಿಡುಗಡೆ ಮಾಡಿದ ಸಚಿವರು , ಪಿಡಿಓ ಅಫ್ ದ ಮಮತ್ ಪ್ರಶಸ್ತಿಯನ್ನು ರಾಮನಗರದ ಪಿಡಿಓ ಅರಮೇಶ್ ರಾಥೋಡ್ ಅವರಿಗೆ ನೀಡಿದರು. ಸಭೆಯಲ್ಲಿ ಎಂ.ಸಿ.ಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿ.ಪಂ. ಸಿಇಒ ಈಶ್ವರ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.