ಶಿರಸಿ: ನಗರದ ಅಡಿಕೆ, ಕಾಳುಮೆಣಸು ಮತ್ತು ಎಲಕ್ಕಿ ವರ್ತಕರ ಸಂಘದಿಂದ ಶಿರಸಿ ಟಿ.ಎಂ.ಎಸ್. ಗೆ ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಜಿ.ಟಿ. ಹೆಗಡೆ ತಟ್ಟೀಸರ ಮತ್ತು ಜಿ.ಎಂ. ಹೆಗಡೆ ಮುಳಖಂಡರವರನ್ನು ಶಾಲು ಹೊದೆಸಿ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಟ್ಟೀಸರರವರು ಮಾತನಾಡಿ ಒಂದು ಸಂಸ್ಥೆ ಹಾಗೂ ವ್ಯಾಪಾರಸ್ಥರು ಸೇರಿ ರೈತರ ಮಹಸೂಲುಗಳಿಗೆ ಒಳ್ಳೆ ಬೆಲೆ ಬರುವಂತೆ ಮಾಡಿದಾಗ ಅವರು ಬದುಕು ಕೂಡ ಹಸನಾಗುತ್ತದೆ. ಇದರಲ್ಲಿ ಜವಾಬ್ದಾರಿಯುತ ಅಡಿಕೆ ಸಂಸ್ಥೆಗಳ ಜವಾಬ್ದಾರಿ ಕೂಡ ಹೆಚ್ಚಿದ್ದು ವ್ಯಾಪಾರಸ್ಥರನ್ನು ಒಗ್ಗೂಡಿಸಿಕೊಂಡು ಹೋದಾಗ ಒಳ್ಳೆ ವಾತಾವರಣ ನಿರ್ಮಾಣವಾಗುತ್ತದೆ. ಇಂದಿನ ಸ್ಥಿತಿಯಲ್ಲಿ ಅನೇಕ ಸಮಸ್ಯೆಗಳಿದ್ದು ಅದೆಲ್ಲವನ್ನು ಎಲ್ಲ ಹಿರಿಯ ಸಹಕಾರಿಗಳೊಂದಿಗೆ ಪೂರ್ವಾಪರ ವಿಚಾರಿಸಿ ಹೆಜ್ಜೆಗಳನ್ನು ಇಡುತ್ತಿದ್ದು, ಸೌಹಾರ್ದ ಬೆಳವಣಿಗೆಗೆ ನಾವು ಹೆಚ್ಚಿನ ಒತ್ತುಕೊಡುತ್ತಿದ್ದೆವೆ ಎಂದರು.
ಸನ್ಮಾನ ಸ್ವೀಕರಿಸಿದ ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ ಒಳ್ಳೆ ಕೆಲಸ ಮಾಡಲು ಹೊರಟಾಗ ಟೀಕೆ, ಟಿಂಗಲ್‌ಗಳು ಬರುವುದು ಸಹಜ. ವ್ಯಾಪಾರಸ್ತರು ಅದೆಲ್ಲವನ್ನು ಬದಿಗೊತ್ತಿ ತಮ್ಮ ತಮ್ಮ ಕಾರ್ಯಕ್ಷಮತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಯಶಸ್ಸು ಸಿಗುವುದು ಖಂಡಿತ ಕೆಲವೊಂದು ಸಂದರ್ಭದಲ್ಲಿ ನಾಮಾಂಕಿತ ಬದಲಿಸಿಕೊಳ್ಳಬೇಕಾದ ಪ್ರಸ್ತುತ ಸ್ಥಿತಿ ಇದ್ದು, ಸಮಾಜದ ಹತ್ತಾರು ಬಗೆಯ ಸಂಘಟನೆಗಳಿಗೆ ದಾನ ಮಾಡುತ್ತಿರುವುದು ಶಿರಸಿಯ ಮಾರುಕಟ್ಟೆಯಾಗಿದ್ದು ಅದರಲ್ಲಿ ವ್ಯಾಪಾರಸ್ಥರ ಕೊಡುಗೆ ಹೇರಳವಾಗಿದೆ ಎನ್ನುತ್ತಾ ರೈತರಿಗೆ ಹೆಚ್ಚಿನ ಸವಲತ್ತು ದೊರೆಯುವಂತೆ ಮಾಡಬೇಕಾಗಿದ್ದು ಸಹಕಾರ ಕ್ಷೇತ್ರದಲ್ಲಿ ಒಂದು ಮಟ್ಟ ಇದೆ. ಅದನ್ನು ದಾಟಲು ಆಗುವುದಿಲ್ಲ ಎಂದರು.
ಟಿಎಂಎಸ್‌ನ ನಿಕಟಪೂರ್ವ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಮಾತನಾಡಿ ಅಡಿಕೆ ಮಾರುಕಟ್ಟೆ ಶಿರಸಿಯಲ್ಲಿ ಬೆಳೆದು ಬಂದ ಹಿನ್ನಲೆ ವಿವರಿಸಿದರು. ಇದೇ ಸಂದರ್ಭದಲ್ಲಿ ಟಿ.ಎಂ.ಎಸ್.ನ ನೂತನ ಆಡಳಿತ ಮಂಡಳಿಯವರಿಗೆ ಗೌರವ ಸಲ್ಲಿಸಲಾಯಿತು.
ವರ್ತಕರ ಸಂಘದ ಪೂಗಭರ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಬಿ. ಲೋಕೇಶ ಹೆಗಡೆ ಪ್ರಗತಿ ಸ್ವಾಗತಿಸಿದರು. ವರ್ತಕರ ಸಂಘದ ಅಧ್ಯಕ್ಷ ಸತೀಶ ಭಟ್ಟ ನಾಡುಗುಳಿ ಪ್ರಾಸ್ತಾವಿಕ ಮಾತನಾಡಿದರೆ ಸಂಘದ ಸದಾನಂದ ಹೆಗಡೆ ನಿರೂಪಿಸಿದರು.