ಜೊಯಿಡಾ: ಇಲ್ಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿ.ಮಾದೇವ ವೆಳಿಪ್ ವೇದಿಕೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ರಾಮನಗರದಲ್ಲಿ ವಿಜೃಂಭಣೆಯಿಂದ ಪ್ರಾರಂಭವಾಯಿತು.
ಮುಂಜಾನೆ ರಾಷ್ಟ್ರಧ್ವಜಾರೋಹಣ , ಪರಿಷತ್ತಿನ ಧ್ವಜಾರೋಹಣ ನಾಡ ಧ್ವಜಾರೋಹಣಗಳು ನಡೆದವು. ನಂತರ ಸಮ್ಮೇಳನಾಧ್ಯಕ್ಷ ಅಜನಾಳ ಭೀಮಾ ಶಂಕರ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಸಾಹಿತ್ಯಾಭಿಮಾನಿಗಳು ಸಾಹಿತ್ಯ ಪರಿಷತ್ ಸದಸ್ಯರು ಊರ ನಾಗರಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಮನಗರದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸಾಕ್ಷಿಯಾದರು. ಕಾರ್ಯಕ್ರಮ ಉದ್ಘಾಟಿಸಿ ಧಾರವಾಡದ ಸಾಹಿತಿ ಡಾ.ಕೆ.ಆರ್ ದುರ್ಗಾದಾಸ ಮಾತನಾಡಿ , ಉತ್ತರ ಕನ್ನಡದ ಸಾಹಿತ್ಯ ಸಂಸ್ಕೃತಿ ಶ್ರೇಷ್ಟವಾಗಿದೆ, ಸಾಹಿತ್ಯದ ಮೂಲಕ ಶಾಂತಿ ಸೌಹಾರ್ದತೆ ಬರಬೇಕಾಗಿದೆ. ಸಮಾಜ ಕಟ್ಟುವ ಶಕ್ತಿ ಸಾಹಿತ್ಯಕ್ಕೆ ಇದೆ. ನಿಜವಾದ ಸಾಹಿತ್ಯಾಸಕ್ತರು ಇಂಥ ಕಾರ್ಯಕ್ರಮಕ್ಕೆ ಬರಬೇಕಾಗಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಈ ನಾಡಿನಲ್ಲಿ ಬೇರೆ ಬೇರೆ ಭಾಷೆಗಳಿದ್ದರು ಇಲ್ಲಿ ಕನ್ನಡ ಸುಮನಸುಗಳು ಸೇರಿದ್ದು ಖುಷಿ ತಂದಿದೆ, ಹಿಂದೆ ನಡೆದ ಈಗ ನಡೆಯುತ್ತಿರುವ ಸಮ್ಮೇಳನಕ್ಕೆ ಆಳುವವರು ಬರುತ್ತಾರೆ ಎಂಬ ನಿರೀಕ್ಷೆ ಇತ್ತು ಬರಲಿಲ್ಲ. ಇಂತಹ ಧೋರಣೆ ಖಂಡನಾರ್ಹ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಭೀಮಾ ಶಂಕರ್ ಮಾತನಾಡುತ್ತ ಜೊಯಿಡಾ ತಾಲೂಕು ಕನ್ನಡ ಕೊಂಕಣಿ , ಮರಾಠಿ ಭಾಷಿಗರ ನೆಲೇನಾಡು, ಎಲ್ಲರೂ ಶಾಂತಿ ಪ್ರೀತಿಯಿಂದ ಬದುಕು ಕಟ್ಟಿಕೊಂಡವರು ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರ ನೇಮಕ ಆಗಬೇಕು. ವಿಶೇಷ ಒತ್ತು ನೀಡಿ ಶಿಕ್ಷಣಕ್ಕೆ ಸಹಕಾರ ನೀಡಬೇಕು. ಶಿಕ್ಷಣದಲ್ಲಿ ಕಲೆ ಸಾಹಿತ್ಯಕ್ಕೆ ಸಂಸ್ಕೃತಿಗೆ ಪ್ರಾಧಾನ್ಯತೆ ಸಿಗಬೇಕು. ಮತ್ತೆ ಉದ್ಯೋಗ ಸೃಷ್ಟಿ ಕೂಡ ಆಗಬೇಕಾಗಿದೆ ಎಂದರು.
ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಅಂತೋನಿ ಜಾನ್ ಧ್ವಜ ಹಸ್ತಾಂತರಿಸಿ ಮಾತನಾಡಿದರು. ಅನೇಕ ಹಿರಿಯರು ಮಾತನಾಡಿದರು. ರಾಮನಗರ ಗ್ರಾಪಂ ಅಧ್ಯಕ್ಷ ಶಿವಾಜಿ ಗೊಸಾವಿ , ರಮೇಶ್ ನಾಯ್ಕ , ಅಜಿತ್ ತೊರವತ್, ಚಂದ್ರಕಾಂತ ದೇಸಾಯಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತ ಶಿಕ್ಷಕ ವಿಷ್ಣು ಪಟಗಾರ ನಿರೂಪಿಸಿದರು. ನಂತರ ಸುಕನ್ಯಾ ದೇಸಾಯಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಪ್ರವೀಣ ನಾಯಕ ಅಧ್ಯಕ್ಷತೆಯಲ್ಲಿ ಜೊಯಿಡಾದಲ್ಲಿ ಯೋಜನೆಗಳು ಮತ್ತು ಬವಣೆಗಳು ವಿಚಾರಗೋಷ್ಠಿ ಸಮ್ಮೇಳನಾಧ್ಯಕ್ಷರ ಬದುಕು ಬರಹ ಸಂವಾದ ಮತ್ತು ಸನ್ಮಾನ , ಸಮಾರೋಪ , ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸ್ವಸಹಾಯ ಸಂಘಗಳ ಮಳಿಗೆಗಳು ಸಾರ್ವಜನಿಕರನ್ನು ಆಕರ್ಷಿಸಿದವು.