ಜೋಯಿಡಾ: ದೀಪದ ಬುಡದಲ್ಲೇ ಕತ್ತಲು ಎಂಬಂತೆ ಜೋಯಿಡಾ ತಾಲೂಕಿನಲ್ಲಿ ವಿದ್ಯುತ್ ಉತ್ಪಾದನೆಯಾದರೂ ಇಲ್ಲಿಯ ಮೂಲ ಜನರಿಗೆ ಮಾತ್ರ ವಿದ್ಯುತ್ ಬೆಳಕು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಜೋಯಿಡಾ ಹೆಸ್ಕಾಂ ಇಲಾಖೆಯ ಕಾರ್ಯಾಲಯದ ಮುಂಭಾಗದಲ್ಲಿ ಶುಕ್ರವಾರ ವೃದ್ದ ದಂಪತಿಗಳು ತಮಗೆ ವಿದ್ಯುತ್ ಇಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.
ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದೋಲಿ ಗ್ರಾಮದ ನಾರಾಯಣ ಪರೋ ವೆಳಿಪ್ ಮತ್ತು ಆನಂದಿ ವೆಳಿಪ್ ದಂಪತಿಗಳು ತಮಗೆ ವಿದ್ಯುತ್ ಇಲ್ಲ ಎಂದು ಇಲಾಖೆಗೆ ಹತ್ತು ಹಲವು ಬಾರಿ ಕೇಳಿಕೊಂಡರೂ ವಿದ್ಯುತ್ ನೀಡಲಾಗಿಲ್ಲ.
ಗಣೇಶಗುಡಿಯಲ್ಲಿ ವಿದ್ಯುತ್ ಉತ್ಪಾದನೆಯಾಗಿ ರಾಜ್ಯ, ಹೊರ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ದೀಪದ ಬುಡದಲ್ಲಿಯೇ ಕತ್ತಲು ಎಂಬ ಹಾಗೆ ಜೋಯಿಡಾ ತಾಲೂಕಿನ ಹಲವಾರು ಹಳ್ಳಿಗಳಿಗೆ ಈವರೆಗೆ ವಿದ್ಯುತ್ ಇಲ್ಲದೆ ಇರುವುದು ಹಾಸ್ಯಾಸ್ಪದವಾಗಿದೆ.
ವಿದ್ಯುತ್ ವಂಚಿತ ಗ್ರಾಮಸ್ಥರಾದ ನಾರಾಯಣ ಪರೋ ವೆಳಿಪ್ ಹಾಗೂ ಅವರ ಪತ್ನಿ ಆನಂದಿ ವೆಳಿಪ್ ಅವರು ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ನಮಗೆ ವಿದ್ಯುತ್ ಇಲ್ಲ, ನಮ್ಮ ತಾಲೂಕಿನಲ್ಲಿ ವಿದ್ಯುತ್ ಉತ್ಪಾದನೆಯಾದರೂ ನಮಗೆ ವಿದ್ಯುತ್ ಇಲ್ಲ. ಡ್ಯಾಂ ನಿರ್ಮಾಣವಾಗಲು ನಮ್ಮವರ ತ್ಯಾಗ ಏನು ಇಲ್ಲವೇ? ವಿದ್ಯುತ್ ಆದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಮಾಧ್ಯಮದ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ.