ಕಾರವಾರ: ನಗರದ ಹಬ್ಬುವಾಡ ರಸ್ತೆಯ ಬಳಿ ಇರುವ ಕುಂಠಿಮಹಮ್ಮಾಯಾ ದೇವಸ್ಥಾನದ ಹತ್ತಿರ ಇಸ್ತ್ರಿ ಅಂಗಡಿಗೆ ತಡರಾತ್ರಿ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮುಕ್ಕಣ್ಣ ಮಡಿವಾಳ ಅವರಿಗೆ ಸೇರಿದ ಅಂಗಡಿಗೆ ಯಾವುದೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಅನುಮಾನ ಕಂಡುಬಂದಿದ್ದು, ಅಂಗಡಿಯಲ್ಲಿದ್ದ 30ಕ್ಕೂ ಅಧಿಕ ಗ್ರಾಹಕರ ಬಟ್ಟೆಗಳು ಹಾಗೂ ಇಸ್ತ್ರಿಪೆಟ್ಟಿಗೆ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು ಸುಮಾರು 2 ಲಕ್ಷ ರೂಪಾಯಿ ನಷ್ಟ ಉಂಟಾಗಿದ್ದಾಗಿ ಅಂದಾಜಿಸಲಾಗಿದೆ.
ಮುಕ್ಕಣ್ಣ ಅವರ ಮನೆ ಪಕ್ಕದ ನಿವಾಸಿ ಮಂಜು ಎಂಬಾತನೊಂದಿಗೆ ಶೌಚಾಲಯ ಬಳಕೆ ವಿಚಾರವಾಗಿ ಜಗಳ ನಡೆದಿದ್ದು ಆತ ಬಟ್ಟೆಗಳಿಗೆ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದನು. ಅವರೇ ಈ ಕೃತ್ಯ ಮಾಡಿರುವು ಸಾಧ್ಯತೆಯಿದೆ ಎಂದು ಮಾಲಿಕರು ಅಂದಾಜಿಸಿದ್ದಾರೆ. ಅಂಗಡಿ ಎದುರಿಗಿದ್ದ ಶಾಲೆಯ ಸಿಸಿಕ್ಯಾಮೆರಾದಲ್ಲಿ ಬೆಂಕಿ ಹಾಕುವ ದೃಶ್ಯಗಳು ಸೆರೆಯಾಗಿದ್ದು, ನಗರ ಠಾಣೆಗೆ ಮುಕ್ಕಣ್ಣ ದೂರು ನೀಡಿದ್ದಾರೆ.