ಬನವಾಸಿ: ಹಿಂದೂ ಧರ್ಮ, ಭಾರತ ದೇಶ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಗಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ, ಭಾರತೀಯ ಜನತಾ ಪಕ್ಷ, ಸಂಘ ಪರಿವಾರ ಇದ್ದರೆ ಮಾತ್ರ ದೇಶ ಉಳಿಯುತ್ತದೆ. ಹಿಂದುತ್ವವು ನಮ್ಮ ದೇಶದ ಉಸಿರಾಗಿದೆ. ಎಲ್ಲಿಯವರೆಗೆ ಇಸ್ಲಾಂ ಇರುತ್ತದೋ, ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿಯಿಲ್ಲವಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಚಾರಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದಿದಂತೆ. ಕೇವಲ ಮೂಲಭೂತ ಸೌಕರ್ಯವೇ ಅಭಿವೃದ್ಧಿಯೆಂದು ಕೊಂಡರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ. ಮುಂಬರುವ ಲೋಕಸಭಾ ಮಹಾ ಸಂಘರ್ಷದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ. ಕಾಂಗ್ರೆಸ್ ಪಕ್ಷದವರು ಈಗಾಗಲೇ ಶಸ್ತ್ರಗಳನ್ನು ತ್ಯಜಿಸಿದ್ದಾರೆ. ವೈಚಾರಿಕವಾಗಿ ನಾವು ಚುನಾವಣೆ ಗೆದ್ದು ತೋರಿಸಬೇಕಾಗಿದೆ. ರಾಜಕೀಯ ಅಂದಮೇಲೆ ವಲಸೆ ಪ್ರಕ್ರಿಯೆ ಸಹಜವಾಗಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ರಾಜಕೀಯ ಡೊಂಬರಾಟ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೆಲ್ಲವನ್ನು ಬದಿಗಿಟ್ಟು ಸಂಘಟನೆಯ ಕಡೆಗೆ ಗಮನಹರಿಸೋಣ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್, ರಾಜ್ಯ ರೈತ ಮೋರ್ಚಾ ಸದಸ್ಯ ಗಣೇಶ ಸಣ್ಣಲಿಂಗಣ್ಣನವರ, ಶಿರಸಿ ಗ್ರಾಮೀಣ ಮಂಡಲ ಉಪಾಧ್ಯಕ್ಷ ಅರವಿಂದ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸಿದ್ದು ಟೆಂಪೋ, ಬನವಾಸಿ ಶಕ್ತಿಕೇಂದ್ರದ ಅಧ್ಯಕ್ಷ ಸಿದ್ದವೀರೇಶ ನೆರಗಲ್, ಹಿರಿಯರಾದ ಟಿ.ಜಿ.ನಾಡಿಗೇರ, ಮೃತ್ಯುಂಜಯ ಚೌದರಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.