ದಾಂಡೇಲಿ: ಹಿಂದಿ ಭಾಷೆಯ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಳೆದೊಂದು ವರ್ಷದಿಂದ ಕಾರವಾರದಲ್ಲಿ ಪ್ರಕರಣ ಎದುರಿಸುತ್ತಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಗೆ ಜಿಲ್ಲಾ ಸತ್ರ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಕಾರವಾರದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಹಿಂದಿ ಭಾಷೆ ಹೋಲುವ ದೇವನಗರಿ ಮತ್ತು ಆಂಗ್ಲ ಭಾಷೆಯ ಅಕ್ಷರಗಳನ್ನು ನಾಮಪಲಕದಲ್ಲಿ ಬಳಸಲಾಗಿತ್ತು. ಇದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಯುವ ಘಟಕದ ಜಿಲ್ಲಾಧ್ಯಕ್ಷ ದಾಂಡೇಲಿಯ ಪ್ರವೀಣ ಕೊಠಾರಿ, ದಾಂಡೇಲಿ ಹಾಗೂ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷರುಗಳಾದ ಮಂಜು ಪಂತೊಜಿ ಮತ್ತು ಉದಯ ನಾಯಕ ಹಾಗೂ ರಾಜ್ಯ ಕಾರ್ಯದರ್ಶಿ ಮೊಹಮ್ಮದ ಹನೀಫ್ ಅವರುಗಳು ಕಾರವಾರಕ್ಕೆ ತೆರಳಿ ಕನ್ನಡ ಅಕ್ಷರ ಕಡೆಗಣಿಸಿದ್ದ ನಾಮಫಲಕದಲ್ಲಿನ ದೇವನಗರಿ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ವಿರೋಧ ವ್ಯಕ್ತಪಡಿಸಿದ್ದರು. ಮಸಿ ಬಳಿದ ಪ್ರಕರಣ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದು ಅಲ್ಲಿನ ಕೊಂಕಣಿ ಭಾಷಿಕರ ಕೆಂಗಣ್ಣಿಗೆ ಕೂಡ ಗುರಿಯಾಗಿತ್ತು. ಮಸಿಬಳಿದಿದ್ದನ್ನು ವಿರೋಧಿಸಿ ಕೊಂಕಣಿ ಭಾಷಿಕರು ಬೃಹತ್ ಪ್ರತಿಭಟನೆ ನಡೆಸಿ ಮಸಿ ಬಳಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಕರವೇ ಕಾರ್ಯಕರ್ತರ ಮೇಲೆ ಕಾರವಾರದಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಕೊನೆಗೂ ಕನ್ನಡಪರ ಕಾರ್ಯಕರ್ತರಿಗೆ ಮೊದಲ ಹಂತದ ಜಯ ದೊರಕಿದ್ದು, ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜುರು ಮಾಡಿದೆ. ವಕೀಲ ಬಿ.ಕೆ. ನಾಯಕ ಕನ್ನಡಪರ ಕಾರ್ಯಕರ್ತರ ಪರವಾಗಿ ವಾದ ಮಂಡಿಸಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆ ಕನ್ನಡ ಭಾಷೆಯ ಪರವಾಗಿ ಹೋರಾಡುವ ಕಾರ್ಯಕರ್ತರಿಗೆ ಕಿರುಕುಳ ನೀಡುವ ಪ್ರಯತ್ನ ಇದಾಗಿದ್ದು, ಈ ಪ್ರಕರಣ ರದ್ದುಕೋರಿ ಉಚ್ಚ ನ್ಯಾಯಲಯಕ್ಕೆ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.