ಶಿರಸಿ: ಮುಂಬರುವ ದಿನಗಳು ಪಕ್ಷಕ್ಕೆ ಜವಾಬ್ದಾರಿಯನ್ನು ಇನ್ನಷ್ಟು ಪ್ರಬಲಗೊಳಿಸಲಿವೆ. ಮುಂದಿನ ಐದು ವರ್ಷಗಳಲ್ಲಿ ಮೋದಿಯವರ ನಾಯಕತ್ವದ ಮೂಲಕ ಪ್ರಪಂಚದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬೆಳವಣಿಗೆ ಹೊಂದಲಿದೆ. ಈ ಮಹತ್ಕಾರ್ಯಕ್ಕೆ ಪ್ರತಿ ಕಾರ್ಯಕರ್ತನೂ ತನ್ನ ಕೊಡುಗೆ ನೀಡಬೇಕು. ಕೇಂದ್ರ ಸರ್ಕಾರದ ಇದುವರೆಗಿನ ಸಾಧನೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಭಾರತದ ಉಜ್ವಲ ಭವಿಷ್ಯದ ಬಗ್ಗೆ ಜನಸಾಮಾನ್ಯನಿಗೆ ನಮ್ಮ ಕಾರ್ಯಕರ್ತರು ತಿಳಿಸಿ ಹೇಳಬೇಕು ಎಂದು ಮಾಜಿ ಸಚಿವ, ಜಿಲ್ಲಾ ಪ್ರಭಾರಿ ಹರತಾಳು ಹಾಲಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಇಂದು 18 ಕೋಟಿ ಕಾರ್ಯಕರ್ತರೊಂದಿಗೆ ಪ್ರಪಂಚದಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಶೋಷಿತರು, ಪೀಡಿತರು, ದಲಿತರನ್ನೂ ಒಳಗೊಂಡಂತೆ ಎಲ್ಲ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿರುವ ನರೇಂದ್ರ ಮೋದಿಯವರನ್ನು ಇಡೀ ದೇಶವೇ ಕೊಂಡಾಡುತ್ತಿದೆ ಎಂದರು.
ರಾಮ ಮಂದಿರ ನಿರ್ಮಾಣವಾದರೆ ಗಲಭೆ ನಡೆಯುತ್ತದೆ ಎಂದೇ ಎಲ್ಲರೂ ಹೇಳುತ್ತಿದ್ದರು. ಈಗ ಜ್ಞಾನ ವ್ಯಾಪಿ ಮಸೀದಿಯಲ್ಲಿಯೂ ಹಿಂದುಗಳಿಂದ ಪೂಜೆ ನಡೆದು ಎಲ್ಲರೂ ಸಹಕರಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಶಾಂತಿಪ್ರಿಯ ಆಡಳಿತಕ್ಕೆ ಇವೆರಡು ಸಾಕ್ಷಿಗಳು ಎಂದು ಅವರು ಹೇಳಿದರು.
ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂದು ದೇಶದ ಚುಕ್ಕಾಣಿಯಿಂದ ಗ್ರಾ.ಪಂ. ಆಡಳಿತದವರೆಗೂ ಬಿಜೆಪಿ ಹಿಡಿತವಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ಸಹ ಹೆಚ್ಚಿದ್ದು, ಪಕ್ಷಕ್ಕೆ ಬದ್ಧತೆ ಇರುವವರನ್ನು ಇಟ್ಟುಕೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ಸಂದರ್ಭವನ್ನು ಸ್ವಾರ್ಥ ಸಾಧನೆಗೆ ಬಳಕೆ ಮಾಡುವಿಕೆ ತಡೆಯುವ ಅಗತ್ಯತೆ ಇದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭ್ರಮೆ ಸೃಷ್ಠಿಸಿ ಜನತೆಗೆ ದ್ರೋಹ ಮಾಡುತ್ತಿದೆ. ಕುಡಿಯುವ ನೀರಿನ ಅಭಾವಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಜಾತಿ ಜಾತಿ ನಡುವೆ ಭೇದ-ಭಾವ ಮಾಡಿ, ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂದು ಆ ಕಡೆ ಬೊಟ್ಟು ಮಾಡುತ್ತಿದೆ. ತಾಕತ್ತಿದ್ದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣ ಬಂದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಲಿ ಎಂದರು.
ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರೇಯ ಮಾತನಾಡಿ, ಬಿಜೆಪಿ ಒಳಗೆ ನಡೆಯುವ ಆಂತರಿಕ ಪ್ರಜಾಪ್ರಭುತ್ವ ಪಕ್ಷವನ್ನು ಉಳಿದೆಲ್ಲ ಪಕ್ಷಗಳಿಗಿಂತ ಭಿನ್ನವಾಗಿಸಿದೆ. ರೂಪಾಂತರ ಪ್ರಕ್ರಿಯೆ ಪಕ್ಷದಲ್ಲಿ ಸದಾ ನಡೆದು ಸಾಮಾನ್ಯ ಕಾರ್ಯಕರ್ತನೂ ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಾನೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶ ಪ್ರಗತಿಯ ದಾಪುಗಾಲು ಹಾಕಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸರಾಸರಿ ಒಂದು ದಿನದಲ್ಲಿ ಕೇವಲ 17 ಕಿ.ಮೀ.ಗೆ ಸೀಮಿತವಾಗಿರುತ್ತಿದ್ದು, ಈಗ 37 ಕಿ.ಮೀ.ಗೆ ಏರಿಕೆಯಾಗಿದೆ. ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿಸುವುದು ಇಂದಿನ ಅನಿವಾರ್ಯ. ಬಿಜೆಪಿ ಕಾರ್ಯಕರ್ತ ತಲೆ ತಗ್ಗಿಸಿ ಮತ ಕೇಳಬೇಕಾಗಿಲ್ಲ, ಎದೆಯುಬ್ಬಿಸಿ ಮತ ಕೇಳುವ ಸಾಧನೆ ನಮ್ಮದಿದೆ. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರ ಕೇಂದ್ರದಲ್ಲಿ ನಡೆದಿಲ್ಲ. ದೇಶದ ಭವಿಷ್ಯದ ದೃಷ್ಠಿಯಿಂದ ಮುಂದಿನ ಎರಡು ಮೂರು ತಿಂಗಳು ಯುದ್ಧದ ಕಾಲದಂತಿದ್ದು, ಪ್ರತಿ ಕಾರ್ಯಕರ್ತನೂ ಜನತೆಗೆ ಕೇಂದ್ರದ ಸಾಧನೆ ತಿಳಿಸಿ ಹೇಳಬೇಕಿದೆ ಎಂದರು.
ಶಾಸಕರಾದ ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ವಿವೇಕಾನಂದ ವೈದ್ಯ, ಜಿಲ್ಲಾ ಸಹಪ್ರಭಾರಿ ಗಿರೀಶ ಪಾಟೀಲ, ಗೋವಿಂದ ನಾಯ್ಕ, ಗುರುಪ್ರಸಾದ ಹರ್ತೆಬೈಲ್ ಇತರರಿದ್ದರು.