ದಾಂಡೇಲಿ : ತಾಲೂಕಿನ ಅಂಬೇವಾಡಿ,ವಿಟ್ನಾಳ, ಬರ್ಚಿ ರಸ್ತೆ, ಮೌಳಂಗಿ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಯೊಂದರ ಹಾವಳಿ ನಿರಂತರವಾಗಿ ಮುಂದುವರಿದ ಪರಿಣಾಮ ಸ್ಥಳೀಯ ರೈತರು ಆತಂಕದಲ್ಲೇ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ರೈತರ ಕೃಷಿ ಬೆಳೆಗಳ ಮೇಲೆ ಕಾಡಾನೆ ದಾಳಿ ಮಾಡುತ್ತಿದ್ದು, ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗುತ್ತಿದೆ.
ಅಂಬೇವಾಡಿ, ವಿಟ್ನಾಳ, ಬರ್ಚಿ ರಸ್ತೆಯಲ್ಲಿ ಹಾಗೂ ಹತ್ತಿರದ ಮೌಳಂಗಿ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಯೊಂದು ಕೃಷಿ ಜಮೀನಿಗೆ ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿದೆ. ಸ್ಥಳೀಯ ರೈತರು ಬೆಳೆದ ಕಬ್ಬು, ಜೋಳ ಕಾಡಾನೆಯ ದಾಳಿಗೆ ತುತ್ತಾಗುತ್ತಿದೆ. ಭಾನುವಾರವೂ ಕಾಡಾನೆ ಮತ್ತೆ ಸ್ಥಳೀಯರ ಕೃಷಿ ಜಮೀನಿಗೆ ನುಗ್ಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಯನ್ನು ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿದ್ದಾರೆ. ಆದರೆ ಆನೆ ಓಡಿಸುವಾಗ ಕಾಡು ಸೇರಿದ ನಂತರ ಮತ್ತೆ ಒಂದೆರಡು ಗಂಟೆಯೊಳಗೆ ರೈತರ ಜಮೀನಿನಲ್ಲಿ ಪ್ರತ್ಯಕ್ಷವಾಗುತ್ತಿದೆ. ಸ್ಥಳೀಯರ ಹಿತದೃಷ್ಟಿಯಿಂದ ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.