ಮೀನುಗಾರರಿಗೆ ಜೈಲು ಭಾಗ್ಯ ನೀಡಿತೇ ರಾಜ್ಯ ಸರಕಾರ !–ಏಕಲವ್ಯ
ಹೊನ್ನಾವರ: ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣದ ಪ್ರದೇಶಕ್ಕೆ ಆಗಮಿಸಿದ್ದ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ. ಕೆ. ಶಿವಕುಮಾರ ಸ್ಥಳೀಯ ಮೀನುಗಾರರಿಗೆ ನಾವಿದ್ದೇವೆ ಹೆದರಬೇಡಿ ಎಂದು ಅಭಯ ನೀಡಿದ್ದರು. ಅವರ ಭರವಸೆಗೆ ಸ್ಥಳೀಯ ಮೀನುಗಾರರು ಚಪ್ಪಾಳೆಯ ಸುರಿಮಳೆಗೈದು ಸಂತಸಪಟ್ಟಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂದು ಭರವಸೆ ನೀಡಿದ ಅಧ್ಯಕ್ಷರು ಇಂದು ಅವರದೇ ಸರಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾರೆ. ಹೀಗಿರುವಾಗ ಬಂದರು ನಿರ್ಮಾಣ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪ್ರತಿರೋಧ ತೋರಿದ ಸ್ಥಳೀಯ ಮೀನುಗಾರರು ಜೈಲು ಸೇರಿದ್ದಾರೆ. ಇದು ಯಾವ ಭಾಗ್ಯ ಎಂದು ಸ್ಥಳೀಯ ಮೀನುಗಾರರಲ್ಲಿ ಪ್ರಶ್ನೆ ಹುಟ್ಟು ಹಾಕಿದೆ.
ರಾಜ್ಯದ ಪ್ರಭಾವಿ ಮುಖಂಡರಲ್ಲಿ ಡಿ ಕೆ ಶಿವಕುಮಾರ ಕೂಡ ಒಬ್ಬರು. ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಡಿ. ಕೆ. ಶಿವಕುಮಾರ ರಾಜಕೀಯ ತಂತ್ರ ಹೆಣೆಯುವುದರಲ್ಲಿ ಎತ್ತಿದ ಕೈ. ಇವರ ನಡೆ ನುಡಿ, ರಾಜಕೀಯ ಖದರ್ ಗೆ ಬೆರಗಾಗದವರೇ ಇಲ್ಲ. ಇಂತ ಮಹಾನ್ ನಾಯಕ ನಮ್ಮೂರಿಗೆ ಬಂದು ಸ್ಥಳೀಯ ಮೀನುಗಾರರ ಪರ ದ್ವನಿ ಎತ್ತಿದಾಗ ಸಹಜವಾಗಿ ಜಿಲ್ಲೆಯಲ್ಲಿ ಹೊಸ ಸಂಚಲನ ಹುಟ್ಟುಹಾಕಿತ್ತು. ಅದರ ಜೊತೆಗೆ ಬಂದರು ಬೇಡ ಎಂದು ನಿರಂತರ ಹೋರಾಟ ಮಾಡುತ್ತಿದ್ದ ಮೀನುಗಾರರಿಗೆ ಗೆದ್ದೆವು ಎಂಬ ನಂಬಿಕೆ ಬಂದಿತ್ತು. ಇದೀಗ ಮತ್ತೆ ವಾಣಿಜ್ಯ ಬಂದರಿಗೆ ಸಂಬಂಧ ಪಟ್ಟಂತೆ ಸರ್ವೇ ಕಾರ್ಯ ಶುರು ಆಗಿದ್ದೆ ತಡ ಮೀನುಗಾರರ ನಂಬಿಕೆ ಹುಸಿ ಆಗಿರುವ ಲಕ್ಷಣ ಕಂಡು ಬಂದಿದೆ.
ಅಂದು ಸ್ಥಳೀಯ ಮುಖಂಡರ ಮನವಿಯ ಮೇರೆಗೆ ಬಂದರು ನಿರ್ಮಾಣವಾಗುವ ಪ್ರದೇಶಕ್ಕೆ ಭೇಟಿ ನೀಡಿ, ಮೀನುಗಾರರು ಯಾವುದೇ ಕಾರಣಕ್ಕೂ ಮನೆ ಬಿಡುವುದು ಬೇಡ. ನಾನು ಇದರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುತ್ತೇನೆ. ರಾಜಕೀಯ ಹೋರಾಟವೋ, ಕಾನೂನು ಹೋರಾಟವೋ ಎಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ನೀವು ಹೆದರುವುದು ಬೇಡ ನಿಮ್ಮ ಜೊತೆ ನಾವಿದ್ದೇವೆ. ಖಾಸಗಿ ಸಂಸ್ಥೆ ಬಂದರು ನಿರ್ಮಾಣ ಮಾಡಲು ಹೊರಟಿರುವುದರ ವಿರುದ್ಧ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ. ಪೊಲೀಸರೇ ಬರಲಿ, ಯಾರೇ ಬರಲಿ, ನೀವು ಹೆದರಬೇಡಿ. ನಿಮ್ಮ ಜತೆ ನಾವಿದ್ದೇವೆ’ ಎಂದು ಭರವಸೆ ನೀಡಿದ್ದರು.
ಕೊರೋನಾ ಪಿಡುಗಿನ ಸಮಯದಲ್ಲಿ ಜನ ದೇವರ ಮೇಲೆ ನಂಬಿಕೆಯಿಟ್ಟು, ದುಡಿಮೆ ಮಾಡಲು ಜನ ಹೋಗುತ್ತಿದ್ದಾರೆ. ಅನೇಕರು ನನ್ನ ಬಳಿ ಕಷ್ಟ-ಸುಖ ಹೇಳಿಕೊಂಡಿದ್ದಾರೆ. ಇದು ರಾಜಕಾರಣ ಮಾಡುವ ವಿಚಾರ ಅಲ್ಲ. ಇದು ರಾಜಕೀಯ ಪಕ್ಷದ ಸಭೆಯೂ ಅಲ್ಲ. ನೇರವಾಗಿ ಜನರ ಸಮಸ್ಯೆ ಅರಿತು ಅವರಿಗೆ ಶಕ್ತಿ ತುಂಬಲು ಇಲ್ಲಿಗೆ ಬಂದಿದ್ದೇನೆ. ಮೀನುಗಾರರ ಭದ್ರತೆ, ಡೀಸೆಲ್ ವಿಚಾರ, ಅವರ ಸಮಸ್ಯೆಗಳನ್ನು ಚರ್ಚಿಸಿದ್ದೇವೆ. ಸುಮಾರು 20 ಪ್ರಮುಖ ವಿಚಾರಗಳಿವೆ ಎಂದಿದ್ದರು.
ಇಲ್ಲಿ ನೂರಾರು ಜನರನ್ನು ಒಕ್ಕಲೆಬ್ಬಿಸಿ ಖಾಸಗಿಯವರಿಗೆ ಜಾಗ ನೀಡಲು ಮುಂದಾಗಿರುವುದು ಸರಿಯಲ್ಲ. ಖಾಸಗಿಯವರಿಗೆ ಬೇರೆ ಕಡೆ ಜಾಗ ನೀಡಬಹುದಿತ್ತು. ಮೀನುಗಾರರು ನೂರಾರು ವರ್ಷಗಳಿಂದ ಈ ಜಾಗದಲ್ಲಿ ಪಾರಂಪರಿಕವಾಗಿ ಜೀವನ ನಡೆಸಿಕೊಂಡು ಬಂದಿದ್ದಾರೆ. ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಬಗ್ಗೆ ನಮ್ಮ ನಾಯಕರು ಮಾಹಿತಿ ನೀಡಿದರು. ಹೀಗಾಗಿ ಈ ಕಾರ್ಯಕ್ರಮ ಪೂರ್ವನಿಗದಿ ಆಗದಿದ್ದರೂ ಇಲ್ಲಿನ ಜನರನ್ನು ಭೇಟಿ ಮಾಡಲು ಬಂದಿದ್ದೇನೆ. ಇವರ ಸಮಸ್ಯೆಗಳ ಬಗ್ಗೆ ನಮ್ಮ ನಾಯಕರ ಜತೆ ಚರ್ಚೆ ಮಾಡಿ, ವಿಧಾನಸಭೆಯಲ್ಲಿ ಯಾವ ರೀತಿ ಹೋರಾಟ ಮಾಡಿ, ಈ ಜನರಿಗೆ ನೆರವಾಗಬಹುದು ಎಂಬುದನ್ನು ಚಿಂತಿಸುತ್ತೇವೆ ಎಂದೆಲ್ಲ ಹೇಳಿದ್ದರು.
ಇಲ್ಲಿಗೆ ಯಾವುದೇ ಪೊಲೀಸರು ಬಂದರೂ ಜನ ಯಾವುದಕ್ಕೂ ಜಗ್ಗಬೇಡಿ. ಇಲ್ಲಿಂದ ಜಾಗ ಖಾಲಿ ಮಾಡಬೇಡಿ. ಇದರ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುತ್ತೇವೆ. ನಾನು, ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಅವರೆಲ್ಲ ಇಲ್ಲಿಗೆ ಬಂದು ಹೋರಾಟ ಮಾಡಬೇಕೇ ಅಥವಾ ಸದನದಲ್ಲಿ ಹೋರಾಟ ಮಾಡಬೇಕೆ ಎಂಬುದನ್ನೂ ಚರ್ಚಿಸುತ್ತೇವೆ. ಇಲ್ಲಿನ ಜನರು ಜಾತಿ, ಧರ್ಮ ಭೇದ ಮರೆತು ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ನಿಮ್ಮ ಜತೆ ನಾನಿದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದು ಮೀನುಗಾರರಿಗೆ ಅಭಯ ನೀಡಿ ಹೋಗಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ಅಂದು ಡಿ ಕೆ ಶಿವಕುಮಾರ್ ಹೇಳಿದ ಮಾತು ಮರೆತುಹೋಯಿತೆ ಅಥವಾ ಅಂದು ಹೇಳಿದ್ದು ಕೇವಲ ಭರವಸೆ ಆಗಿತ್ತೇ ಎಂದು ಮೀನುಗಾರರಿಗೆ ಯಕ್ಷ ಪ್ರಶ್ನೆಯಾಗಿ ಕಾಡಲು ಪ್ರಾರಂಭವಾಗಿದೆ.
ಬಾಕ್ಸ್
ಪಟ್ಟು ಬಿಡದ ಮೀನುಗಾರರು : ಹಠಕ್ಕೆ ಬಿದ್ದ ಕಂಪನಿ
ಬಹು ಕೋಟಿ ವೆಚ್ಚದ ವಾಣಿಜ್ಯ ಬಂದರು ನಿರ್ಮಾಣಕ್ಕೆ ಬಹುತೇಕ ಎಲ್ಲರಿಗೂ ಮನಸ್ಸಿದೆ. ಸ್ಥಳೀಯ ಮೀನುಗಾರರ ವಿರೋಧ ಕೊಂಚ ಹಿನ್ನಡೆ ಉಂಟು ಮಾಡಿತ್ತು ಅಂದರೆ ತಪ್ಪಾಗಲಾರದು. ಈ ಹಿಂದೆ ಸಂಸದರು ಕೂಡ ಬಂದರು ಆಗಬೇಕು ಎಂದಿದ್ದರು. ಸ್ಥಳೀಯ ಮುಖಂಡರಿಗೆ ಅಡಗತ್ತರಿಯಂತೆ ಸಂದಿಗ್ದ ಪರಿಸ್ಥಿತಿಯಲ್ಲಿದ್ದಂತೆ ಕಂಡು ಬಂದಿತ್ತು. ಕಂಪನಿ ಎಷ್ಟೇ ಪ್ರಯತ್ನಪಟ್ಟರು, ಸರಕಾರ ಒಪ್ಪಿಗೆ ಕೊಡದೆ ಏನು ಮಾಡಲು ಸಾಧ್ಯವಿಲ್ಲ. ಮೀನುಗಾರರು ಎಷ್ಟೇ ಹೋರಾಟ ಮಾಡಿದರೂ, ಅವರ ಮನವೊಲಿಸಿ, ಅಥವಾ ಬಲ ಪ್ರಯೋಗ ಮಾಡಿ ಬಂದರು ನಿರ್ಮಾಣ ಮಾಡೇಮಾಡುತ್ತಾರೆ ಎಂದು ಈಗಾಗಲೇ ಚರ್ಚೆ ಹುಟ್ಟು ಹಾಕಿದೆ.
ವಾಣಿಜ್ಯ ಬಂದರು ಕಾಮಗಾರಿ ಇತ್ತೀಚಿನ ಕೆಲವು ವರ್ಷಗಳಿಂದ ಹೊನ್ನಾವರಕ್ಕೆ ಪೊಲೀಸ್ ಪಡೆಯನ್ನೇ ಕರೆಯಿಸಿಕೊಳ್ಳುತ್ತಿದೆ. ಇದರ ಹೊರತಾಗಿ ಹೊಸದು ಎನ್ನುವಂತೆ ಕೆಲವು ದಿನಗಳ ಹಿಂದೆ ಖಾಸಗಿ ವ್ಯಕ್ತಿಗಳ ತಂಡ ಬಂದರು ನಿರ್ಮಾಣ ಆಗುವ ಪ್ರದೇಶಕ್ಕೆ ಬಂದು ರಸ್ತೆ ಅಳೆಯುವ ಕೆಲಸ ಪ್ರಾರಂಭ ಮಾಡಿದ್ದರು. ಆಗಲು ಕೂಡ ಮೀನುಗಾರರು ಪ್ರತಿರೋಧ ವ್ಯಕ್ತಪಡಿಸಿದ್ದರು. ದೂರು ಪ್ರತಿ ದೂರು ಅಂತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಂದಂತ ಖಾಸಗಿ ವ್ಯಕ್ತಿಗಳು ರೌಡಿ ಶಿಟರ್ ಗಳು ಎಂದು ಜಾಲತಾಣದಲ್ಲಿ ಹರಿದಾಡಿತ್ತು.
ಬಂದರು ನಿರ್ಮಾಣ ಬೇಡ ಎಂದು ಮೀನುಗಾರರು ಪಟ್ಟು ಹಿಡಿದು ಹೋರಾಟ ಮಾಡುತ್ತಿದ್ದರೆ, ಸರಕಾರ ಮತ್ತು ಗುತ್ತಿಗೆ ಪಡೆದ ಕಂಪನಿ ಮಾಡಿಯೇ ಸಿದ್ದ ಎಂದು ಹಲವಾರು ರೀತಿಯ ಪ್ರಯತ್ನವನ್ನು ನಿರಂತರವಾಗಿ ನಡೆಸಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಹಲವಾರು ಬಾರಿ ಪ್ರಯತ್ನ ನಡೆಸಿದರು. ಪರ-ವಿರೋಧ, ನ್ಯಾಯಾಲಯದ ಹೋರಾಟ ಅಂತ ಅಡೆತಡೆ ಉಂಟಾಗುತ್ತಲೇ ಇತ್ತು. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಥಮ ಪ್ರಯತ್ನ ಎನ್ನುವಂತೆ ಖಾಸಗಿ ವ್ಯಕ್ತಿಗಳು ಗುಂಪು ಬಂದು ವಾಪಾಸ್ ಹೋದ ನಂತರ, ಇದೀಗ ಬಿಗಿ ಪೊಲೀಸ್ ಬಂದಬಸ್ತನೊಂದಿಗೆ ಸರ್ವೇ ಕಾರ್ಯ ನಿರಾತಂಕವಾಗಿ ನಡೆದಿದೆ.