ಯಲ್ಲಾಪುರ: ಸ್ಕೌಟ್ ಮತ್ತು ಗೈಡ್ಸ್, ಎನ್.ಎಸ್.ಎಸ್, ಎನ್.ಸಿ.ಸಿ ರಾಷ್ಟ್ರಭಕ್ತಿಯ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅವರು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಕಟ್ಟುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಷ್ಟ್ರದ ಸಂಕೇತಗಳಾದ ಧ್ವಜ, ರಾಷ್ಟ್ರಗೀತೆ, ಸಂಕೇತಗಳನ್ನು ಗೌರವಯುತವಾಗಿ ಬಳಸಿದಾಗ ರಾಷ್ಟ್ರ ನಮ್ಮನ್ನು ಕಾಯುತ್ತದೆ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವಾಗ ಯಾವುದೇ ಅವಾಂತರಗಳು ನಡೆಯಬಾರದು. ಅಂತಹ ಅವಾಂತರಗಳನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಪೂರಕ ಎಂದರು.
ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ನಂದನ ಬಾಳಗಿ ಅಧ್ಯಕ್ಷತೆ ವಹಿಸಿದ್ದರು. ಪಿಎಸ್ಐ ನಿರಂಜನ ಹೆಗಡೆ ರಾಷ್ಟ್ರಧ್ವಜದ ಮಹತ್ವದ ಕುರಿತು ವಿವರಿಸಿದರು. ಸ್ಕೌಟ್ ಮತ್ತು ಗೈಡ್ಸ್ ನ ಶಿಕ್ಷಕರು, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ರೇಂಜರ್ಸ್ಗಳಿಗೆ ಧ್ವಜ ಸಂಹಿತೆಯ ಕುರಿತು ಮಾಹಿತಿ ನೀಡಲಾಯಿತು. ಧ್ವಜ ಕಟ್ಟುವ ಕುರಿರು ತರಬೇತಿ ನೀಡಲಾಯಿತು. ತಾ.ಪಂ ಪ್ರಭಾರಿ ಇಒ ನಾಗರಾಜ ನಾಯ್ಕ, ಎಸಿಎಫ್ ಹಿಮವತಿ ಭಟ್, ಬಿಇಒ ಎನ್.ಆರ್.ಹೆಗಡೆ, ಆರ್.ಎಫ್.ಒ ಎಲ್.ಎ.ಮಠ, ತಾ.ಪಂ ಮಾಜಿ ಅಧ್ಯಕ್ಷೆ ಭವ್ಯಾ ಶೆಟ್ಟಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ.ಎಸ್.ಸಿ ಇತರರಿದ್ದರು. ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯಕ ನಿರ್ವಹಿಸಿದರು.