ಸಿದ್ದಾಪುರ: ತಾಲೂಕಿನ ಕಂಚಿಕೈ ಗ್ರಾಮದ ಶಿರಗುಣಿಯ ಶ್ರೀ ಕಲ್ಲೇಶ್ವರ ದೇವರ ಅಷ್ಟಬಂಧ ಮಹೋತ್ಸವ ಜ. 24 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ. ಜ.24 ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆಯೊಂದಿಗೆ ಪ್ರಾರಂಭವಾಗಲಿದ್ದು ನಂತರ ಬ್ರಹ್ಮ ಕೂರ್ಚ ಹವನ, ಮಹಾಗಣಪತಿ ಹೋಮ ಹಾಗೂ ವಿವಿಧ ವಿಧಿವಿಧಾನಗಳು ನಡೆಯಲಿವೆ. ಜ. 25ರ ಬೆಳಗ್ಗೆ ಅಧಿವಾಸ ಹೋಮ, ಶಕ್ತಿ ಹೋಮ, ಪ್ರತಿಷ್ಠಾ ಹೋಮ ನಂತರದಲ್ಲಿ ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳವರು ಶ್ರೀ ಕಲ್ಲೇಶ್ವರ ದೇವರ ಪುನಃ ಪ್ರತಿಷ್ಠಾಪನೆ ನೆರವೇರಿಸುವರು.
ಇದೇ ಸಂದರ್ಭದಲ್ಲಿ ಅಷ್ಟ ಬಂಧ ಲೇಪನ, ಜೀವ ಕಲಶ ಅಭಿಷೇಕ, ಪ್ರಾಣ ಪ್ರತಿಷ್ಠಾಪನೆ ಶಿಖರ ಪ್ರತಿಷ್ಠಾಪನೆ ಪರಿವಾರ ದೇವತೆಗಳ ಪ್ರತಿಷ್ಠಾಪನೆ ಸೇರಿ ವಿವಿಧ ವಿಧಿವಿಧಾನಗಳು ನಡೆಯಲಿವೆ. ಜ. 26ರಂದು ಹೋಮ ಮಹಾ ಪೂರ್ಣಾಹುತಿ, ಬ್ರಹ್ಮ ಕಲಶಅಭಿಷೇಕ, ಬಲಿ ಉತ್ಸವ, ಮಹಾಪೂಜೆ, ಅನ್ನ ಸಂತರ್ಪಣೆ, ವಿಪ್ರ ಆಶೀರ್ವಾದ ಮುಂತಾದ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಕೀರ್ತನೆ, ಯಕ್ಷಗಾನ:
ಶ್ರೀಕಲ್ಲೇಶ್ವರ ಅಷ್ಟಬಂಧ ಪ್ರಯುಕ್ತ ಜ. 25 ರಂದು ಮಧ್ಯಾಹ್ನ ನಾರಾಯಣ ದಾಸ ಹೀಪನಳ್ಳಿ ಇವರಿಂದ ಕೀರ್ತನೆ ಹಾಗೂ ಭಜನಾ ಕಾರ್ಯಕ್ರಮ, ಜ. 26ರ ರಾತ್ರಿ 9 ಕ್ಕೆ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲ ಜೋಶಿ ತಿಳಿಸಿದ್ದಾರೆ.