ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಗರಸಭೆ ದಾಂಡೇಲಿ ಹಾಗೂ ಉತ್ತರ ಕನ್ನಡ ಜಿಲ್ಲಾ ದೇಹದಾರ್ಡ್ಯ ಸಂಸ್ಥೆ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯ ದೇಹದಾರ್ಡ್ಯ ಸ್ಪರ್ಧೆ ಹಾಗೂ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮವು ಬುಧವಾರ ರಾತ್ರಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್ ಉದ್ಘಾಟಿಸಿ, ಸ್ಪರ್ಧೆಗೆ ಶುಭವನ್ನು ಕೋರಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ.ವಿ.ವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ. ಬಿ. ಎಂ. ಪಾಟೀಲ, ಬಹುತೇಕರು ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಮ್ಮೆ ದೇಹ ಕೆಟ್ಟರೆ ಅದನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಿಲ್ಲ. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ದೈಹಿಕವಾಗಿ ಚೆನ್ನಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢರಾಗಿರಬಹುದು. ಈ ನಿಟ್ಟಿನಲ್ಲಿ ಯುವಕರು ಸಾಧನೆಗೆ ಹೆಚ್ಚು ಒತ್ತು ಕೊಡಬೇಕು ಎಂದರು. ದಾಂಡೇಲಿಯ ಸರಕಾರಿ ಪದವಿ ಮಹಾವಿದ್ಯಾಲಯ ಖಾಸಗಿ ಶಿಕ್ಷಣ ಸಂಸ್ಥೆಯಂತೆ ಸರ ವೇಗದಲ್ಲಿ ಪ್ರಗತಿ ಸಾಧಿಸುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ. ಒಕ್ಕುಂದ ವಹಿಸಿ ಮಾತನಾಡುತ್ತಾ, ಕಾಲೇಜಿನ ಸರ್ವತೋಮುಖ ಪ್ರಗತಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ಅವರ ಕೊಡುಗೆ ಮತ್ತು ಕಾಳಜಿ ಸ್ಮರಣೀಯ. ಕರ್ನಾಟಕ ವಿಶ್ವವಿದ್ಯಾಲಯದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸ್ಪೂರ್ತಿಯಾಗಿದೆ. ನಮ್ಮ ಕಾಲೇಜಿನ ಬಗ್ಗೆ ನಂಬಿಕೆಯನ್ನು ಇಟ್ಟು ಈ ಕಾರ್ಯಕ್ರಮವನ್ನು ಆಲೋಚನೆ ಮಾಡಲು ವಿಶ್ವವಿದ್ಯಾಲಯ ಅವಕಾಶ ನೀಡಿರುವುದು ಇಡೀ ದಾಂಡೇಲಿಗೆ ಹೆಮ್ಮೆಯನ್ನು ತಂದಿದೆ ಎಂದರು.
ವೇದಿಕೆಯಲ್ಲಿ ನಗರಸಭೆಯ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರ್, ಸಂಜಯ್ ನಂದ್ಯಾಳ್ಕರ್, ಮಹಾದೇವ ಜಮಾದಾರ, ಪ್ರೀತಿ ನಾಯರ್, ರುಹಿನಾ ಖತೀಬ್, ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ.ಸುರೇಶ್ ವಾಲಿಕಾರ ಪ್ರಾರ್ಥನೆ ಹಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಟ.ನಾಸೀರ್ ಅಹ್ನದ್.ಎಂ.ಜಂಗೂಭಾಯಿ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ನಿಶಾಥ್ ಶರೀಫ್ ವಂದಿಸಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೂಲಿಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ ಒಟ್ಟು 44 ಸ್ಪರ್ದಾಳುಗಳು ಭಾಗವಹಿಸಿದ್ದರು. ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಅಂತಿಮವಾಗಿ ರಾಣೆಬೆನ್ನೂರಿನ ಆರ್.ಟಿ.ಎಸ್ ಕಾಲೇಜಿನ ವಿದ್ಯಾರ್ಥಿ ಗಣೇಶ್ ಮಿಸ್ಟರ್ ಕರ್ನಾಟಕ ಯೂನಿವರ್ಸಿಟಿ ಗೌರವಕ್ಕೆ ಪಾತ್ರರಾದರು.