ಯಲ್ಲಾಪುರ: ಕಾವ್ಯ ವಿಸ್ತಾರವಾದದ್ದು,ಅದು ಓದಿ,ಹಂಚಿಕೊಳ್ಳುವ ಮೂಲಕ ತನ್ನ ಹರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕಿನ ಅಧ್ಯಕ್ಷ ಗಣಪತಿ ಕಂಚಿಪಾಲ್ ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ ಸಭಾಭವನದಲ್ಲಿ ಸಿರಿ ಕಲಾ ಬಳಗ ಹಮ್ಮಿಕೊಂಡಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನೋವು,ಸಂತೋಷ ಇದ್ದಾಗ ಕವಿತೆ ಹುಟ್ಟುತ್ತದೆ. ಕವಿತೆ ಒತ್ತಾಯ ಪೂರ್ವಕವಾಗಿ ಬರುವಂತದ್ದಲ್ಲ. ಕವಿತೆ ಬರೆಯುವಾಗ ಬಹಳ ಎಚ್ಚರದಿಂದ ಆಳವಾಗಿ ಯೋಚಿಸಿ ಬರೆಯುವ ಪ್ರವೃತ್ತಿ ಬೆಳೆಯಬೇಕು ಎಂದರು.
ಕಸಾಪ ತಾಲೂಕಿನ ಗೌರವ ಕಾರ್ಯದರ್ಶಿ ಜಿ ಎನ್ ಭಟ್ ತಟ್ಟಿಗದ್ದೆ ಮಾತನಾಡಿ, ಸಾಹಿತ್ಯದ ಪ್ರತಿಭೆಗಳಿಗೆ ತಾಲೂಕಿನ ಲ್ಲಿ ಪ್ರೋತ್ಸಾಹಿಸುವ ಕೆಲಸ ಪರಿಷತ್ತು,ಸಾಹಿತ್ಯ ಸಂಘಟನೆಗಳು ಮಾಡುತ್ತ ಬಂದಿದ್ದು,ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕವಿಗೋಷ್ಠಿಯಲ್ಲಿ ಕವಿಗಳಾದ ಕೃಷ್ಣ ಭಟ್ ನಾಯ್ಕನಕೆರೆ, ಸುಬ್ರಾಯ ಗಾಂವ್ಕಾರ ಬಿದ್ರೆಮನೆ, ಮಂಗಲಾ ಭಾಗ್ವತ್, ಸೀತಾ ಗಂಜೀಸರ, ವಿಶ್ವೇಶ್ವರ ಗಾಂವ್ಕಾರ, ಮಹಾಬಲೇಶ್ವರ ಭಟ್ ಬೆಳಸೂರು, ಶ್ರೀಧರ ಅಣಲಗಾರ, ದಿವ್ಯಾ ಭಾಗ್ವತ್, ನವೀನಕುಮಾರ ಎಜಿ, ಹೇಮಾವತಿ ಭಟ್, ಶರಾವತಿ ಹೆಗಡೆ, ಸೀತಾ ಹೆಗಡೆ, ಸರೋಜಾ ಭಟ್ಟ ಕವಿತೆ ವಾಚಿಸಿದರು. ಸಿರಿ ಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ ನಿರೂಪಿಸಿದರು.