ದಾಂಡೇಲಿ: ಹಿಂದೂ ಧರ್ಮೀಯರ ಭಕ್ತಿ ಪ್ರಧಾನವಾದ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತವಾಗಿ ನದಿ ಸ್ನಾನ ಮತ್ತು ವನಭೋಜನವನ್ನು ಸವಿಯಲು ನಗರದ ಸಮೀಪದಲ್ಲಿರುವ ಮೌಳಂಗಿ ಇಕೋ ಪಾರ್ಕಿಗೆ ಸೋಮವಾರ ದಾಂಡೇಲಿ, ಜೋಯಿಡಾ ತಾಲೂಕು ಮಾತ್ರವಲ್ಲದೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನಸಾಗರವೇ ಹರಿದು ಬಂದಿತ್ತು.
ಮೌಳಂಗಿ ಇಕೋ ಪಾರ್ಕ್‌ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಳಿಗ್ಗೆಯಿಂದ ಆಗಮಿಸಿ, ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಆನಂತರ ವನಭೋಜನವನ್ನು ಸವಿದರು.
ಜನವರಿ 14 ಮತ್ತು 15 ರಂದು ಕಾಳಿ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಮೌಳಂಗಿ ಇಕೋ ಪಾರ್ಕ್‌ಗೆ ಭದ್ರತೆಯ ದೃಷ್ಟಿಯಿಂದ ಅರಣ್ಯ ಇಲಾಖೆ 80ಕ್ಕೂ ಹೆಚ್ಚಿನ ಅರಣ್ಯ ಪಾಲಕರನ್ನು ಹಾಗೂ ಪೋಲಿಸ್ ಇಲಾಖೆ 30 ಸಿಬ್ಬಂದಿಗಳನ್ನು ನಿಯೋಜಿಸಿತ್ತು.
ಸೋಮವಾರ 5000ಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು, ದಾಂಡೇಲಿ ವಲಯ ಅರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ, ಉಪ ವಲಯಾರಣ್ಯಾಧಿಕಾರಿ ಆನಂದ ರಾಠೋಡ, ಫಾರೆಸ್ಟರ್ ವೀರೇಶ್ ಹಾಗೂ ಮೌಳಂಗಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ವಿನೋದ್ ಮೈನಾಗೋಳ ಮೊದಲಾದವರ ನೇತೃತ್ವದಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸಿಪಿಐ ಭೀಮಣ್ಣ ಸೂರಿ, ಪಿಎಸ್ಐಗಳಾದ ಕೃಷ್ಣಾ ಗೌಡ ಅರಕೇರಿ, ಜಗದೀಶ್, ಯಲ್ಲಪ್ಪ.ಎಸ್ ಅವರುಗಳ ನೇತೃತ್ವದಲ್ಲಿ ಪೊಲೀಸರು ಭದ್ರತೆಯನ್ನು ನೀಡಿದ್ದರು.