ದಾಂಡೇಲಿ : ಯಾರ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ವಿದ್ಯುತ್ ಎಷ್ಟು ಖರ್ಚಾದರೇನು, ಕರೆಂಟ್ ಬಿಲ್ ಹೇಗೂ ನಗರಸಭೆ ಕೊಡುವುದಲ್ಲವೆ ಎಂಬ ನಿರ್ಲಕ್ಷದ ಧೋರಣೆಯಿಂದಾಗಿ ನಗರದ ಹಳೆ ದಾಂಡೇಲಿಯಲ್ಲಿ ಹಗಲು ಹೊತ್ತಿನಲ್ಲಿಯೂ ಬೀದಿ ದೀಪ ಉರಿಯುತ್ತಿರುವುದು ಸೋಮವಾರ ಕಂಡು ಬಂದಿದೆ.
ರಾತ್ರಿ ಬೆಳಗಿದ ದೀಪ ಮುಂಜಾನೆ ಆರಿಸಬೇಕು. ಆದರೆ ಸೋಮವಾರ ಮಧ್ಯಾಹ್ನವಾದರೂ ಬೀದಿ ದೀಪಗಳು ಉರಿಯುವ ಮೂಲಕ ನಗರ ಸಭೆಯ ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ಬೇಜವಾಬ್ದಾರಿತನವನ್ನು ಸಾಬೀತುಪಡಿಸಿದೆ. ಇನ್ನಾದರೂ ನಗರ ಸಭೆಯ ಅಧಿಕಾರಿಗಳು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಎಚ್ಚರಿಕೆಯನ್ನು ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.