ಕಾರವಾರ: ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನೊಂದಣಿ ಮಾಡಿ, ಯೋಜನೆಯ ಸೌಲಭ್ಯವನ್ನು ಒದಗಿಸುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಯುವನಿಧಿ ಯೋಜನೆಯ ನೊಂದಣಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 2022-23 ರಲ್ಲಿ ಪದವಿ / ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳು ( 2023 ನೇವರ್ಷದಲ್ಲಿಉತ್ತೀರ್ಣರಾದವರು ) ಯುವನಿಧಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹರಾಗಿದ್ದು, ಪದವೀಧರರಿಗೆ ರೂ.3000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ. 1500 ರೂ ಗಳ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ವರೆಗೆ ನೀಡುವ ಯುವನಿಧಿ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ತಾಲೂಕುಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ ಜಿಲ್ಲೆಯ ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಜಿಲ್ಲೆಯಲ್ಲಿ 32 ಪದವಿ ಕಾಲೇಜುಗಳು ಹಾಗೂ 8 ಡಿಪ್ಲೋಮಾ ಕಾಲೇಜುಗಳಿದ್ದು, ಈ ಸಂಸ್ಥೆಗಳಲ್ಲಿ 2022-23 ರಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಸಂಪರ್ಕಿಸಿ ,ಯೋಜನೆಯ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡುವಂತೆ ಹಾಗೂ ಎಲ್ಲಾ ಗ್ರಾಮ ಪಂಚಾಯತ್, ತಹಸೀಲ್ದಾರ್ ಕಚೇರಿಗಳ ವ್ಯಾಪ್ತಿಯಲ್ಲಿ ಯೋಜನೆಯ ಕುರಿತಂತೆ ಪ್ರಚಾರ ಫಲಕಗಳನ್ನು ಅಳವಡಿಸುವುದರ ಜೊತೆಗೆ, ಸೋಷಿಯಲ್ ಮೀಡಿಯಗಳ ಮೂಲಕ ಸಹ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ತಿಳಿಸಿದರು.
ಜನವರಿ 12 ಕ್ಕೆ ಯುವನಿಧಿ ಯೋಜನೆಯು ಮುಖ್ಯಂತ್ರಿಗಳಿ0ದ ಉದ್ಘಾಟನೆಯಾಗಲಿದ್ದು, ಅಂದು ರಾಜ್ಯದಲ್ಲಿ ನೊಂದಣಿ ಮಾಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದ್ದು ,ಜಿಲ್ಲೆಯಲ್ಲಿ ಇದುವರೆಗೆ 752 ಮಂದಿ ಮಾತ್ರ ಯೋಜನೆಗೆ ನೊಂದಣಿ ಮಾಡಿದ್ದು, ಜಿಲ್ಲೆಯ ಅರ್ಹ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಹೇಳಿದರು.
ಈ ಯೋಜನೆಗೆ ಅಭ್ಯರ್ಥಿಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಪದವಿ/ಡಿಪ್ಲೋಮಾ ಪಡೆದವರು, ಕನಿಷ್ಠ 6 ವರ್ಷರಾಜ್ಯದ ನಿವಾಸಿಗಳಾಗಿರುವವರು ಮಾತ್ರ ಅರ್ಹರಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ/ ಡಿಪ್ಲೋಮಾ ಉತ್ತೀರ್ಣದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿದ್ದು, ಯೋಜನೆಯ ನೊಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದರು.
ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2022-23 ರಲ್ಲಿ ಪದವಿ/ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಅರ್ಹ ಎಲ್ಲಾ ಪದವಿ/ಡಿಪ್ಲೋಮಾ ಪದವೀಧರರು ಸರ್ಕಾರದ ಯೋಜನೆಯ ನೆರವು ಪಡೆಯುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ್ ನಾಯ್ಕ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಡಿ.ಟಿ,ನಾಯ್ಕ್ , ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.