ಹಳಿಯಾಳ:ಕೆಎಲ್ಎಸ್ ವಿಡಿಐಟಿ ಹಳಿಯಾಳಕ್ಕೆ ಪ್ರತಿಷ್ಠಿತ ಟಾಟಾ ಹಿಟಾಚಿ ಸಂಸ್ಥೆಯ ಅಧಿಕಾರಿಗಳು ಜನವರಿ 3ರಂದು ಭೇಟಿ ನೀಡಿದರು.
ಟಾಟಾ ಹಿಟಾಚಿ ಕಂಪನಿಯ ಬೆಂಗಳೂರು ಶಾಖೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮುರಳಿಧರ್ ರಾವ್, ಧಾರವಾಡ ಶಾಖೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮೋನಿಕುಟ್ ಶರ್ಮ, ಧಾರವಾಡ ಶಾಖೆಯ ಸಿ ಎಸ್ ಆರ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ದೀಕ್ಷಿತ್ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು. ಸಂಶೋಧನೆ, ಉದ್ಯಮಗಳೊಂದಿಗೆ ಮೈತ್ರಿ, ಪ್ರಾಜೆಕ್ಟ್ ಗಳಿಗೆ ಪಡೆದ ಸಹಾಯ ಧನ, ನ್ಯಾಕ್ ಮಾನ್ಯತೆ ಸೇರಿದಂತೆ, ಮಹಾವಿದ್ಯಾಲಯವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೈಗೊಂಡಿರುವ ಉಪಕ್ರಮಗಳನ್ನು ಶ್ಲಾಘಿಸಿದರು.
ತಾಂತ್ರಿಕ ವಸ್ತು ಸಂಗ್ರಹಾಲಯ “ಜಾಗೃತಿ” ಹಾಗೂ ಟೊಯೋಟಾ ಕಂಪನಿಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದರು. ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ ಟಾಟಾ ಹಿಟಾಚಿ ಧಾರವಾಡದಲ್ಲಿ ಕೈಗೊಂಡಿರುವ ಪ್ರಾಜೆಕ್ಟ್ ಕಾರ್ಯವನ್ನು ಪ್ರಶಂಸಿಸಿದರು. ತಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ದೀರ್ಘಾವಧಿಯ ಇಂಟರ್ನ್ಶಿಪ್ ಹಾಗೂ ಪ್ರಾಜೆಕ್ಟ್’ಗಳನ್ನು ನೀಡಲು ಉತ್ಸುಕವಾಗಿದೆ ಎಂದು ಹೇಳಿದರು. ಪ್ರಾಧ್ಯಪಕರಿಗಾಗಿ ತರಬೇತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ ಉನ್ನತೀಕರಣಗೊಳಿಸಲು ಟಾಟಾ ಹಿಟಾಚಿ ಸಂಸ್ಥೆಯು ಮಹಾವಿದ್ಯಾಲಯಕ್ಕೆ ಸಹಕರಿಸುತ್ತಿರುವುದು ಸಂತಸ ತಂದಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಲೋಕುರ್ ಮತ್ತು ಪ್ರಾಚಾರ್ಯ ಡಾ.ವಿ.ಎ. ಕುಲಕರ್ಣಿ ಹೇಳಿದ್ದಾರೆ.
ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಪ್ರಭು, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಮುರುಗಯ್ಯ ಎಸ್ ಬಿ, ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಸಂಚಾಲಕ ಪ್ರೊ. ರಜತ್ ಆಚಾರ್ಯ, ಪ್ರೊ. ಗುರುರಾಜ ಸತ್ತಿಗೇರಿ ಹಾಗೂ ಪ್ರೊ. ನವೀನ್ ಹಿರೇಮಠ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.