ಸಿದ್ದಾಪುರ: ನಮ್ಮಲ್ಲಿ ಸಂಪಾದನೆಯಾಗಿರುವ ಜ್ಞಾನ ಅದು ಪ್ರೀತಿಪೂರ್ವಕವಾಗಿ ಮಾರ್ಗದರ್ಶನವಾಗಿ ಬೇರೊಬ್ಬರಿಗೆ ಸಿಗಬೇಕು. ಈ ರೀತಿಯಲ್ಲಿ ನಿಮ್ಮ ಮುಂದಿನ ಕೆಲಸ ಕಾರ್ಯಗಳು ಇರಲಿ, ನಮ್ಮ ಮಕ್ಕಳಿಗೆ ಹೇಗೆ ಶಿಕ್ಷಣ ಮಾರ್ಗದರ್ಶನ ನೀಡುತ್ತೇವೋ ಹಾಗೆ ಶಾಲೆಯಲ್ಲಿನ ಮಕ್ಕಳಿಗೂ ನೀಡಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ. ಬಸವರಾಜ್ ಹೇಳಿದರು.
ಅವರು ಪಟ್ಟಣದಲ್ಲಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಏರ್ಪಡಿಸಿದ ಸಾವಿತ್ರಿಬಾಯಿ ಪುಲೆ ಜಯಂತಿ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ತಾಲೂಕಿನಲ್ಲಿ ಶೇಕಡ 70ರಷ್ಟು ಮಹಿಳಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸಾರದ ಹಲವು ಒತ್ತಡದ ನಡುವೆಯೂ ಉತ್ತಮ ಪ್ರತಿಭೆಗಳನ್ನು ರೂಪಿಸುವಲ್ಲಿ ಜವಾಬ್ದಾರಿ ವಹಿಸಿರುವುದು ಶ್ಲಾಘನೀಯ. ಇಂದು ನಾವೆಲ್ಲರೂ ಸುಶಿಕ್ಷಿತ ಸಮಾಜವನ್ನು ನೋಡುತ್ತಿದ್ದೇವೆ ಎಂದರೆ ಅಂದು ಸಾವಿತ್ರಿಬಾಯಿ ಫುಲೆ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಇದಕ್ಕೆಲ್ಲ ಕಾರಣವಾಗಿದೆ ಎಂದರು.
ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಐ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಪೂರ್ಣಿಮಾ ದೊಡ್ಮನಿ, ಬಾಲಚಂದ್ರ ಪಟಗಾರ ಎಂ.ಕೆ. ಮೊಗೇರ್, ಜಿ.ಆರ್.ಹೆಗಡೆ, ಚೈತನ್ಯ ಕುಮಾರ್, ಎಂ.ವಿ. ನಾಯ್ಕ್, ಮಹೇಶ್ ಹೆಗಡೆ, ಮಂಜುಳ ಪಟಗಾರ, ವಿಜಯಲಕ್ಷ್ಮಿ ಅಮೃತ ಪೈ ಉಪಸ್ಥಿತರಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ ಪ್ರಸ್ತಾವಿಕ ಮಾತನಾಡಿದರು, ಸನ್ಮಾನಿತರ ಪರ ಸವಿತಾ ಹೆಗಡೆ ಮಾತನಾಡಿದರು. ಪದ್ಮಾವತಿ ಸಂಗಡಿಗರು ಪ್ರಾರ್ಥಿಸಿದರು ,ಗುರುರಾಜ್ ನಾಯ್ಕ್, ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು ರೇಷ್ಮಾ, ಎಂ.ಆರ್.ಭಟ್ ನಿರೂಪಿಸಿದರು. ತಾಲೂಕಿನ 18 ಕ್ಲಸ್ಟರ್ ನ ಆಯ್ದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.