ಶಿರಸಿ: ತಾಲೂಕಿನ ಕಬ್ನಳ್ಳಿಯಲ್ಲಿ ನಾಗರಾಜ ಹೆಗಡೆ ಮತ್ತು ಕುಟುಂಬದವರು ಸಂಘಟಿಸಿದ್ದ ಯಕ್ಷ-ಗಾನ ವೈಭವ ಜನಮನಗೆದ್ದು ವೈವಿದ್ಯಮಯ ಹಾಡುಗಳೊಂದಿಗೆ ಅಭಿಮಾನಿಗಳಿಗೆ ರಸದೌತಣ ನೀಡಿದೆ.
ಯಕ್ಷಗಾನದ ಸಂಪ್ರದಾಯದಂತೆ ಗಣಪತಿ ಪೂಜೆಯ ಹಾಡಿನೊಂದಿಗೆ ಆರಂಭಗೊಂಡ ಗಾನ ವೈಭವ ವಿವಿಧ ಪೌರಾಣಿಕ ಪ್ರಸಂಗ ಮತ್ತು ಆಧುನಿಕ ಪ್ರಸಂಗಗಳ ಹಾಡಿನ ಸಮ್ಮಿಶ್ರಣಗೊಂಡು ಪ್ರೇಕ್ಷಕರ ಅಪೇಕ್ಷಿತ ಹಾಡು ಕೂಡ ಹಾಡಲ್ಪಟ್ಟು ಸರಿಸುಮಾರು 3 ತಾಸುಗಳಿಗೂ ಮಿಕ್ಕಿ ಗಾನ ಲೋಕವನ್ನು ಸೃಷ್ಟಿಸಿದೆ.
ಭಾಗವತಿಕೆಯಲ್ಲಿ ಪಾಲ್ಗೊಂಡಿದ್ದ ಹಿಲ್ಲೂರು ರಾಮಕೃಷ್ಣ ಹೆಗಡೆ ಮತ್ತು ತುಳಗೇರಿ ಗಜಾನನ ಭಟ್ಟ ಕೆಲವೊಂದು ಜನಪ್ರಿಯ ಪ್ರಸಂಗದ ಆಯ್ದ ಹಾಡುಗಳನ್ನು ಹಾಡುತ್ತ ಮತ್ತೆ ಕೆಲವು ಪ್ರಸಂಗದ ಹಾಡನ್ನು ದ್ವಂದ್ವವಾಗಿ ಹಾಡಿ ಸಭಿಕರ ಕರತಾಡನಕ್ಕೆ ಭಾಜನರಾದರು., ಶೃಂಗಾರ ರಸ ಪದ್ಯ, ಹಾಸ್ಯ ಪ್ರದಾನ ಹಾಡು, ವೀರ ರಸ ಪದ್ಯ ಹೀಗೆ ಹತ್ತಾರು ಬಗೆಯಲ್ಲಿ ವೈವಿಧ್ಯಮಯವಾಗಿ ಪ್ರಸ್ತುತಗೊಳಿಸಿದರು. ಭಾಗವತರ ಪ್ರತಿಯೊಂದು ಹಾಡಿಗೆ ಸನ್ನಿವೇಶಕ್ಕೆ ತಕ್ಕಂತೆ ಮದ್ದಲೆ ವಾದನದಲ್ಲಿ ನಾದಶಂಕರ ಬಿರುದಾಂಕಿತ ಶಂಕರ ಭಾಗವತ ಯಲ್ಲಾಪುರ ಮತ್ತು ಅನಿರುದ್ಧ ಹೆಗಡೆ ವರ್ಗಾಸರ ಹಾಗೂ ಚಂಡೆ ವಾದನದಲ್ಲಿ ವಿಘ್ನೇಶ್ವರ ಕೆಸರಕೊಪ್ಪ ಮತ್ತು ಆಧುನಿಕ ಪ್ರಸಂಗದ ಹಾಡಿಗೆ ತಬಲಾದಲ್ಲಿ ಗಣೇಶ ಗುಂಡ್ಕಲ್ ರಾಗ, ತಾಳಗಳ ಏರಿಳಿತವನ್ನು ಸಮ್ಮಿಶ್ರಗೊಳಿಸುತ್ತ ಸೊಗಸಾಗಿ ನುಡಿಸಿದರು.
ಒಟ್ಟಾರೆ ಗಾನವೈಭವದ ಮೆರಗನ್ನು ಹೆಚ್ಚಿಸಿದ ಕಲಾವಿದರು ಸುಧನ್ವಾರ್ಜುನ, ಐರಾವತ, ಕವಿರತ್ನ ಕಾಳಿದಾಸ, ರಾಮ ನಿರ್ಯಾಣ, ಚಂದ್ರಮುಖಿ ಸೂರ್ಯಸಖಿ ಮುಂತಾದ ಪ್ರಸಂಗದೊಂದಿಗೆ ಕವಿ ದಿ.ಹೊಸ್ತೋಟ ಮಂಜುನಾಥ ಭಾಗವತರಿಂದ ರಚಿತವಾದ ಅನೇಕ ಪ್ರಸಂಗದ ಹಾಡು ಕೂಡ ಹಾಡಲ್ಪಟ್ಟು ನೆರೆದ ಸಭಿಕರ ಮನಗೆದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಚೇತನಾ ಮತ್ತು ನಾಗರಾಜ ಹೆಗಡೆ ಕಬ್ನಳ್ಳಿ ದಂಪತಿ ಮತ್ತು ಹಿರಿಯ ನ್ಯಾಯವಾದಿ ಆರ್.ಜಿ.ಹೆಗಡೆ ಕೇರಿಮನೆ ಪುಷ್ಪ ದಂಪತಿಗಳು ಎಲ್ಲ ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆಯೊಂದಿಗೆ ಗೌರವಿಸಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ಗಾನವೈಭವ ಕಾರ್ಯಕ್ರಮ ನಿರೂಪಿಸಿದರು.