
ಶಿರಸಿ: ಉತ್ತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಪ್ರಾಯೋಜಕತ್ವದಲ್ಲಿ ಅಮ್ಮ ಪ್ರತಿಷ್ಠಾನ ಶಿರಸಿ ಅವರಿಂದ ಕೋಡನಗದ್ದೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ಯಶಸ್ವಿಯಾಗಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಹೆಗಡೆ ಸಂಪೆಗದ್ದೆ ಮಾತನಾಡಿ, ಯಕ್ಷಗಾನಲ್ಲಿ ಮೊದಲು ಕೆಲವೇ ಕೆಲವು ಜನರು ಭಾಗವಹಿಸುತ್ತಿದ್ದರು. ಆದರೆ ಈಗ ಚಿಕ್ಕ ಮಕ್ಕಳಿಂದ ಪ್ರಾರಂಭಿಸಿ ಮಹಿಳೆಯರಾದಿಯಾಗಿ ಎಲ್ಲರೂ ಭಾಗವಹಿಸುವುದರ ಮೂಲಕ ಯಕ್ಷಗಾನ ಕಲೆ ಸರ್ವರ ಕಲೆಯಾಗಿದೆ ಎಂದರು. ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಭಟ್ಟ ಚಂಡೆ ಬಾರಿಸುವುದು ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತ ಸದಸ್ಯ ಪ್ರವೀಣ ಹೆಗಡೆ ಮಣ್ಮನೆ ಭಾಗವಹಿಸಿ , ಉತ್ತರ ಕನ್ನಡದಲ್ಲಿ ಯಕ್ಷಗಾನ ಕಲೆ ಹಾಸುಹೊಕ್ಕಾಗಿದೆ. ಅದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಂತರ ನಡೆದ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟ್ಕಲ್, ಶ್ರೀಪತಿ ಕಂಚೀಮನೆ, ಉಮೇಶ್ ಹೆಗಡೆಕಟ್ಟಾ ಮುಮ್ಮೇಳದಲ್ಲಿ ಪ್ರವೀಣ ತಟ್ಟೀಸರ, ಕೃಷ್ಣ ನಾಯ್ಕ ವಾನಳ್ಳಿ, ಜಟ್ಟಿ ಮುಕ್ರಿ ಕಡಬಾಳ ಜನರನ್ನು ರಂಜಿಸಿದರು. ಗ್ರಾಮ ಪಂಚಾಯತ ಕೋಡನಗದ್ದೆ ಮತ್ತು ಶಬರ ಸಂಸ್ಥೆ ಸೋಂದಾ ಸಹಕಾರ ನೀಡಿದರು.