ಹಳಿಯಾಳ : ಕರ್ನಾಟಕ ಸರ್ಕಾರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ತಾಲೂಕು ಉಪ ಕಾರಾಗೃಹ ಹಳಿಯಾಳ, ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳ ಇವರ ಸಹಯೋಗದಲ್ಲಿ ಕಾರಾಗೃಹ ಬಂಧಿಗಳಿಗೆ ಪಟ್ಟಣದ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ 6 ದಿನದ ಫಾಸ್ಟ್ ಫುಡ್ ಸ್ಟಾಲ್ ಉದ್ಯಮ ತರಬೇತಿ ಶಿಬಿರಕ್ಕೆ ಗುರುವಾರ ಚಾಲನೆಯನ್ನು ನೀಡಲಾಯಿತು.
ತರಬೇತಿ ಕಾರ್ಯಕ್ರಮವನ್ನು ಸಹಾಯಕ ಆಯುಕ್ತರಾದ ಜಯಲಕ್ಷ್ಮಿ ರಾಯಕೋಡ ಅವರು ಉದ್ಘಾಟಿಸಿ ಮಾತನಾಡುತ್ತಾ, ತಪ್ಪು ಮಾಡುವುದು ಸಹಜ,ತಿದ್ದಿ ನಡೆಯುವುದೇ ಮನುಷ್ಯತ್ವ ಎಂಬಂತೆ ಬಂಧಿತ ಕೈದಿಗಳಿಗೆ ಇದೊಂದು ಸುವರ್ಣ ಅವಕಾಶ. ಈ ಸ್ವ ಉದ್ಯೋಗ ತರಬೇತಿಯ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಕೌಶಲ್ಯಭರಿತರಾಗಿ ಹೊರ ಹೊಮ್ಮಿ ಇಲ್ಲಿಂದ ಹೊಸ ಬದುಕನ್ನು ರೂಪಿಸಿ, ಶಿಸ್ತಿನ ಜೀವನ ನಡೆಸಬೇಕೆಂದು ಕರೆ ನೀಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಬಡ್ಡಿ, ಮಾತನಾಡಿ ನಿವೆಲ್ಲ ಆರ್ಥಿಕವಾಗಿ ಸಬಲರಾಗಲು ಇಂತಹ ತರಬೇತಿಯ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾರಾಗೃಹದ ಅಧೀಕ್ಷರಾದ ಕಲ್ಲಪ್ಪ ಗಸ್ತಿ ಮಾತನಾಡಿ, ಈ ತರಬೇತಿ ತಮ್ಮ ಜೀವನಕೆ ಹೊಸ ತಿರವು ನೀಡಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ ಚವ್ವಾಣ, ಉಪನ್ಯಾಸಕ ಮಹೇಶ್ ಎಚ್, ತರಬೇತುದಾರರಾದ ನೀನಾ ಶೆಟ್ಟಿ, ಕಾರಾಗೃಹದ ಸಿಬ್ಬಂದಿಗಳು ಹಾಗೂ ಬಂಧಿತ ಕಾರಾಗೃಹ ಬಂಧಿಗಳು ಉಪಸ್ಥಿತರಿದ್ದರು.