ಶಿರಸಿ: ಅಲ್ಪಸಂಖ್ಯಾತರ ಒಲೈಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ10 ಸಾವಿರ ಕೋಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಸಂವಿಧಾನ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ತುಷ್ಟಿಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಅವರು ನಗರದ ದೀನ ದಯಾಳ ಸಭಾಭವನದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ, ಮಾತನಾಡಿದರು.
ಕಾಂಗ್ರೆಸಿಗರು ಲಂಗು-ಲಗಾಮು ಇಲ್ಲದೇ, ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಇವರ ದುರಾಡಳಿತದಿಂದ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ. ಭೀಕರ ಬರಗಾಲದ ಎದುರಿಸುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ಕೇವಲ ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ತೆಲಂಗಾಣ ಚುನಾವಣೆಗೆ ರಾಜ್ಯವನ್ನು ಕಾಂಗ್ರೆಸ್ ಎಟಿಎಂ ಆಗಿ ಬಳಸಿಕೊಂಡಿದೆ. ರಾಜ್ಯದ ಹಣವನ್ನು ಕೊಳ್ಳೆ ಹೊಡೆದು ಪ್ರಚಾರಕ್ಕೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ ಮೇಲಿನ ಸಿಬಿಐ ಪ್ರಕರಣವನ್ನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ, ಹಿಂತೆಗೆದುಕೊಂಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದಾರೆ ತನಿಖೆ ಎದುರಿಸಬೇಕಿತ್ತು ಎಂದು ಸವಾಲು ಹಾಕಿದ್ದಾರೆ.
ಸಂವಿಧಾನ ಶಿಲ್ಪಿ ಹಾಗೂ ಮಹಾನ್ ನಾಯಕ ಬಿ.ಆರ್.ಅಂಬೇಡ್ಕರ ಅವರನ್ನು ಕಾಂಗ್ರೆಸ್ ಅಗೌರವಯುತವಾಗಿ ನಡೆಸಿಕೊಂಡು, ರಾಜಕೀಯ ಅವಕಾಶ ನೀಡದೇ, ಅವರನ್ನು ಸೋಲಿಸಿದ್ದಾರೆ. ಸ್ವರ್ಗಸ್ಥರಾದ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಗೆ ಜಾಗ ನೀಡಿಲ್ಲ. ಬಾಯಲ್ಲಿ ಮಾತ್ರ ಅಂಬೇಡ್ಕರ ತತ್ವ ಹೇಳುತ್ತಾರೆ. ಕಾಂಗ್ರೆಸ್ ಬಣ್ಣ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅಂಬೇಡ್ಕರ ಅವರಿಗೆ ನಿಜಯವಾಗಿಯೂ ಗೌರವ ನೀಡಿದ್ದಾರೆ ಎಂದರು.
ತೆಲಂಗಾಣ ಗೆದ್ದಿರುವುದು ನಾವೇ ಎಂದು ಹೇಳಿಕೊಂಡು ಕಾಂಗ್ರೆಸ್ ಮುಖಂಡರು ಓಡಾಡುತ್ತಿದ್ದಾರೆ ಬಿ.ಆರ್.ಎಸ್ ನಿಂದ ಕಾಂಗ್ರೆಸ್ ಗೆದ್ದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಮುಂದಿನ ದಿನಗಳಲ್ಲಿ ತೆಲಂಗಾಣವನ್ನು ಬಿಜೆಪಿ ಪಡೆಯುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ವೆಂಕಟೇಶ ನಾಯಕ ಮಾತನಾಡಿ, ವಿಧಾನಸಭಾ ಚುನಾವಣೆಯ ನಂತರ ಪಕ್ಷದ ಹಿನ್ನೆಡೆಯಿಂದ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಉತ್ಸಾಹಿ ಯುವ ನಾಯಕ ಬಿ.ವೈ.ವಿಜಯೇಂದ್ರ ಮತ್ತು ಹಿರಿಯ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಪಕ್ಷದ ಸಂಘಟನೆ ಮಾಡಬೇಕಿದೆ. ಕೇಂದ್ರ ತಂಡದ ಮಾರ್ಗದರ್ಶನದಂತೆ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಪಂಚ ರಾಜ್ಯದ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ ಎಂದರು.
ಜಿಲ್ಲಾ ಪ್ರಭಾರಿ ಗಿರೀಶ ಪಟೇಲ, ವಿಭಾಗ ಸಹ ಪ್ರಭಾರಿ ಎನ್.ಎಸ್.ಹೆಗಡೆ, ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಪಂಚಾಯತ ರಾಜ್ ವಿಕೇಂದ್ರೀಕರಣ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಹ ಪ್ರಭಾರಿ ಪ್ರಸನ್ನ ಕೆರೆಕೈ, ಮಾಜಿ ಶಾಸಕ ಸುನೀಲ ಹೆಗಡೆ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ಎಸಳೆ ಸ್ವಾಗತಿಸಿದರು. ಗುರುಪ್ರಸಾದ ಹೆಗಡೆ ಹರ್ತೆಬೈಲ ನಿರೂಪಿಸಿದರು.
: ಪಕ್ಷದ ಚಟುವಟಿಕೆ ನಿರಂತರವಾಗಿ ನಡೆಯುತ್ತದೆ. ರಾಜ್ಯಾಧ್ಯಕ್ಷರ ಬದಲಾವಣೆಯಂತೆ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಸ್ಥಾನ ಬದಲಾವಣೆಯೂ ಆಗುತ್ತದೆ.
– ವೆಂಕಟೇಶ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ
ಬಿಜೆಪಿ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಹಾಗೂ ವಿಶ್ವಾಸವಿದ್ದು, ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರದಲ್ಲಿ ಗೆದ್ದು, ರಾಜ್ಯದಲ್ಲಿ 28 ಸ್ಥಾನ ಗೆದ್ದು ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗುವಂತೆ ಕಾರ್ಯನಿರ್ವಹಿಸಬೇಕಿದೆ. ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಘಟನೆ ಮಾಡಿದ್ದಾರೆ. ನಮ್ಮ ಜವಾಬ್ದಾರಿ ಮುಂದಿನವರಿಗೆ ಪ್ರೇರಣೆ ನೀಡುವ ಭಾವನೆ ಇರಬೇಕು. ಜವಾಬ್ದಾರಿ ಬೇರೆ ಆಗಬಹುದು. ಆದರೆ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಕೇಂದ್ರ ಸರ್ಕಾರದ ಫಲಾನುಭವಿಗಳು ಪ್ರತಿ ಮನೆಯಲ್ಲಿದ್ದಾರೆ. ಆ ಎಲ್ಲ ಕಾರ್ಯಕ್ರಮಗಳನ್ನು ತಿಳಿಸಬೇಕು.