ಹೊನ್ನಾವರ: ವಕೀಲ ವೃತ್ತಿ ಅತ್ಯಂತ ಗೌರವದ ವೃತ್ತಿ. ಸಮಾಜ ವಕೀಲರನ್ನು ಗೌರವದಿಂದ ಕಾಣುತ್ತದೆ. ಸಮಾಜದಲ್ಲಿ ಗೌರವ, ನಂಬಿಕೆ ಉಳಿಸಿಕೊಳ್ಳಲು ವಕೀಲರೂ ಸಹ ನಿತ್ಯವೂ ನವೀಕರಣ ಹೊಂದಬೇಕು. ಜ್ಞಾನ ಸಂಪಾದನೆಯಲ್ಲಿ ತೊಡಗಿಕೊಂಡಿರಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಕರೆ ನೀಡಿದರು.
ಹೊನ್ನಾವರ ವಕೀಲರ ಸಂಘದಿಂದ ವಕೀಲರ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಘವು ನೀಡಿದ ಸನ್ಮಾನವನ್ನು ಸ್ವೀಕರಿಸಿ, 50 ವರ್ಷ ವಕೀಲಿ ವೃತ್ತಿಯನ್ನು ಪೂರೈಸಿದ ಹಿರಿಯ ವಕೀಲ ಜಿ.ವಿ.ಭಟ್ಟರನ್ನು ಸನ್ಮಾನಿಸಿ, ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಉತ್ತಮ ವಕೀಲನಾಗಲು ಕನಿಷ್ಟ ಆರಂಭದ 14 ವರ್ಷ ವನವಾಸದಂತೆ ಕಳೆಯಬೇಕು. ವೃತ್ತಿಯ ಬಗ್ಗೆ ಗೌರವವಿರಬೇಕು ಎಂದು ವಕೀಲರಿಗೆ ಕಿವಿಮಾತು ಹೇಳಿದರು.
ನಮ್ಮ ದೇಶದ ಲಿಖಿತ ಸಂವಿಧಾನ ನಮಗೆ ಉತ್ತಮ ನೆಮ್ಮದಿಯ ಬದುಕನ್ನು ನೀಡಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಕೊಡುಗೆ ಅಪಾರವಾದದ್ದು. ದೇಶದ ತ್ರಿವರ್ಣ ಧ್ವಜದ ನಡುವೆ ಅಶೋಕ ಚಕ್ರವನ್ನು ಅಳವಡಿಸಲು ಅಂಬೇಡ್ಕರ ಸಲಹೆಯನ್ನು ಸ್ವೀಕರಿಸಲಾಯಿತು. ತ್ಯಾಗ, ಪ್ರೀತಿ, ಬಲಿದಾನಗಳ ಸಂಕೇತವಾದ ಅಶೋಕ ಚಕ್ರ ನಮ್ಮ ರಾಷ್ಟ್ರ ಧ್ವಜವನ್ನು ಅಲಂಕರಿಸಿ, ಬದುಕಿನ ದಿಕ್ಸೂಚಿಯಾಗಿದೆ. ನಮ್ಮೊಂದಿಗೆ ಸ್ವತಂತ್ರಗೊಂಡ ಪಾಕಿಸ್ತಾನ, ಹತ್ತಿರದ ಬಾಂಗ್ಲಾದೇಶ, ಶ್ರೀಲಂಕಾ ಅರಾಜಕತೆಯನ್ನು ಎದುರಿಸುವಂತಾಗಿದೆ. ಆದರೆ ಗಟ್ಟಿ ಅಡಿಪಾಯದ ಸಂವಿಧಾನದ ಅಡಿಯಲ್ಲಿ ರೂಪುಗೊಂಡ ಕಾನೂನುಗಳಿಂದ ನಾವು ಉತ್ತಮ ಜೀವನವನ್ನು ನಡೆಸುವಂತಾಗಿದೆ ಎಂದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್ ಮಾತನಾಡಿ, ವಕೀಲರು ಮತ್ತು ನ್ಯಾಯಾಧೀಶರು ರಥದ ಚಕ್ರಗಳಂತೆ. ಸಮರ್ಪಣಾ ಭಾವದಿಂದ ವೃತ್ತಿಯಲ್ಲಿ ತೊಡಗಿಕೊಂಡ ವಕೀಲರಿಗೆ ವೃತ್ತಿ ಎಂದಿಗೂ ಕೈ ಬಿಡುವುದಿಲ್ಲ. ಅವರಿಗೂ ಅವರ ಕುಟುಂಬಕ್ಕೂ ಒಳಿತನ್ನು ಮಾಡುತ್ತದೆ. ಸಮಾಜಕ್ಕೂ ಒಳಿತು ಮಾಡುತ್ತದೆ. ಆದ್ದರಿಂದ ವಕೀಲರು ಅಧ್ಯಯನ ಶೀಲರಾಗಿ ವೃತ್ತಿಯಲ್ಲಿ ತತ್ಪರತೆಯನ್ನು ಕಾಣಬೇಕು ಎಂದರು.
50 ವರ್ಷಗಳ ಕಾಲ ವಕೀಲ ವೃತ್ತಿಯನ್ನು ನಡೆಸಿ ಬಂದ ಹಿರಿಯ ನ್ಯಾಯವಾಧಿ ಜಿ.ವಿ.ಭಟ್ಟ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಆರಂಭದ ವೃತ್ತಿ ಬದುಕಿಗೂ ಇಂದಿನ ವೃತ್ತಿ ಬದುಕಿನ ವಾಸ್ಥವವನ್ನು ವಿಶ್ಲೇಷಿಸಿದರು. ಕಿರಿಯ ವಕೀಲರಲ್ಲಿ ಅಧ್ಯಯನ ಶೀಲತೆ, ವೃತ್ತಿ ತತ್ಪರತೆ ಇನ್ನಷ್ಟು ಹೆಚ್ಚಬೇಕಾಗಿದೆ. ವೃತ್ತಿಯ ಕುರಿತು ಸಮಾಜ ನೀಡುತ್ತಿರುವ ಗೌರವವನ್ನು ಇನ್ನಷ್ಟು ದ್ವಿಗುಣಗೊಳಿಸಲು ಇನ್ನಷ್ಟು ಆಸಕ್ತಿಯನ್ನು ಯುವಕರು ವೃತ್ತಿಯಲ್ಲಿ ಬೆಳೆಸಿಕೊಳ್ಳಲಿ ಎಂದರು.
ವೇದಿಕೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಕುಮಾರ ಜಿ., ಪ್ರಧಾನ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಧೀಶ ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟೆ ಉಪಸ್ಥಿತರಿದ್ದರು. ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಕುರಿತು ವಕೀಲ ಜಿ.ವಿ.ಭಟ್ಟ, ಸನ್ಮಾನಿತ ಜಿ.ವಿ.ಭಟ್ಯ ಪರವಾಗಿ ವಕೀಲ ಎಮ್.ಎನ್.ಸುಬ್ರಹ್ಮಣ್ಯ ಅಭಿನಂದನಾ ನುಡಿಗಳನ್ನಾಡಿದರು. ಕೆ.ವಿ ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಿ.ಕೆ ಹೆಗಡೆ ಹರಿಕೆರೆ ಹಾಗೂ ಗೋಪಾಲಕೃಷ್ಣ ಭಟ್ಟ, ಮಯೂರ ಹೆಗಡೆಯವರಿಂದ ಯಕ್ಷಗಾನ ಶೈಲಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಕೀಲ ನಾಗರಾಜ ಕಾಮತ ಸ್ವಾಗತಿಸಿದರು. ವಕೀಲ ಎಮ್.ಎಸ್. ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಎಮ್. ಎನ್ ಸುಬ್ರಹ್ಮಣ್ಯ ನಿರ್ವಹಿಸಿದರು. ಮನೋಜ ಎಮ್ ಜಾಲಿಸತ್ಗಿ ವಂದಿಸಿದರು.