ಸಾಂಸ್ಕೃತಿಕ ಸೊಬಗಿನ ನಮ್ಮನೆ ಹಬ್ಬಕ್ಕೆ ಚಾಲನೆ – ಪ್ರಶಸ್ತಿ ಪ್ರದಾನ
ಶಿರಸಿ: ನಾವು ಎಂದೂ ಕನ್ನಡ ಬೆಳೆಸಬೇಕಿಲ್ಲ. ಅದು ಸಾಕಷ್ಟು ಬೆಳೆದಿದೆ. ಆದರೆ ಕನ್ನಡಕ್ಕೆ ಈಗ ಬೇಕಿರುವದು ಓಬಮಾ ಬಲ, ಬೆಂಬಲ. ಓಬಮಾ ಎಂದರೆ ಬೇರೆಯಲ್ಲ, ಕನ್ನಡವನ್ನು ಓದಬೇಕು, ಅದನ್ನು ಬಳಸಬೇಕು ಹಾಗೂ ಸುಸ್ಪಷ್ಟ ಮಾತನಾಡಬೇಕು. ಇಷ್ಟು ಮಾತ್ರ ಕನ್ನಡದ ಬಲವರ್ಧನೆಗೆ ಸಾಕು ಎಂದು ಕನ್ನಡದ ಪೂಜಾರಿ, ವಾಗ್ಮಿ ಹಿರೇಮಗಳೂರಿನ ಕಣ್ಣನ್ ಕರೆ ನೀಡಿದರು.
ಅವರು ಶನಿವಾರ ರಾತ್ರಿ ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಹಮ್ಮಿಕೊಂಡ ಸಾಂಸ್ಕೃತಿಕ ಸೊಬಗಿನ ನಮ್ಮನೆ ಹಬ್ಬದಲ್ಲಿ ನಮ್ಮನೆ ಪ್ರಶಸ್ತಿಯನ್ನು ಅಕ್ಕಿ ಡಾಕ್ಟರ್ ಶಶಿಕುಮಾರ ತಿಮ್ಮಯ್ಯ, ಕಲಾವಿದ ನಾಗೇಂದ್ರ ಭಟ್ಟ ಮೂರೂರು, ಕಿಶೋರ ಪುರಸ್ಕಾರವನ್ನು ಶ್ರೀವತ್ಸ ಗುಡ್ಡೆದಿಂಬ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಕನ್ನಡಕ್ಕೆ ಇರುವ ಅಸಾಧ್ಯ ಸಾಧ್ಯತೆ ಬಳಸಿಕೊಳ್ಳಬೇಕು. ಬಳಸಿ ಬೆಳೆಸುವದೇ ಇದಕ್ಕಿರುವ ದಾರಿ. ಬದುಕಿನಲ್ಲಿ ದೀಪ ಹಚ್ಚಬೇಕು. ಬೆಂಕಿ ಹಚ್ಚಬಾರದು. ಆರಿಸಿ ಬಂದವರು ಬೆಂಕಿ ಆರಿಸಬೇಕು, ದೀಪ ಆರಿಸಬಾರದು. ಬಾಗುವದು ಬದುಕು. ಬೀಗುವುದು ಬದುಕಲ್ಲ. ಬೆಳೆಯುವದಾದರೆ ತೆಂಗಿನ ಮರದಂತೆ ಬೆಳೆಯಬೇಕು, ಬಾಳೆಯಂತೆ ಬಾಗಬೇಕು ಎಂದು ಮಾರ್ಮಿಕವಾಗಿ ಮಾತನಾಡಿದ ಕಣ್ಣನ್, ಹಳ್ಳಿಯ ನೈಸರ್ಗಿಕ ಸಂತೋಷ, ಸಂಸ್ಕೃತಿ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ನಮ್ಮ ಮನೆಯ ಸಂಸ್ಕೃತಿ ಉಳಿಯುವುದು ಹಳ್ಳಿಯಿಂದಲೇ. ರಾಮರಾಜ್ಯ ಅದು ಗ್ರಾಮರಾಜ್ಯ ಎಂದು ಗಾಂಧಿಜೀ ಸಹ ಹೇಳಿದ್ದಾರೆ ಎಂದರು.
ನಮ್ಮನೆ ಹಬ್ಬ ಒಂದು ವಿಶಿಷ್ಟ ಹಬ್ಬ. ಇಂಥ ಹಬ್ಬಗಳು ಎಲ್ಲಡೆ ನಡೆಯಬೇಕು. ಸಂಸ್ಕೃತಿ ಬೆಳೆಸಲು ಮಕ್ಕಳಿಗೂ ಇಂಥ ದೇಶೀ ಸೊಗಡಿನ ಹಬ್ಬ ತೋರಿಸಬೇಕು. ಹಳ್ಳಿಯ ಸಂಸ್ಕೃತಿಯನ್ನು ನಗರಕ್ಕೂ ಪಸರಿಸಬೇಕು. ಸಂಸ್ಕಾರ ಉಳಿಸಿದರೆ ಸಂಸ್ಕೃತಿ ವಿನಾಶವಾಗದಂತೆ ತಡೆಯಬಹುದು. ನಗರಗಳ ಮೂಲಕ ಶಿಕ್ಷಣವನ್ನು ವಿಲಕ್ಷಣಗೊಳಿಸುತ್ತಿದ್ದೇವೆ. ಅದನ್ನು ತಡೆಯಬೇಕಿದೆ ಎಂದ ಕಣ್ಣನ್, ವಿಶ್ವಾಸದ, ನಂಬಿಕೆಯ, ಲವಲವಿಕೆಯ ಮಾತು, ಬದುಕು ಕಳೆದುಕೊಂಡಿದ್ದೇವೆ. ಕನ್ನಡ ಭಾಷೆ ಯಾವತ್ತೂ ಹೃದಯವಾಣಿ ಆಗಬೇಕು. ಕನ್ನಡ ಬದುಕಿಸುವ ಕೆಲಸ ಆಗಬೇಕು ಎಂದರು.
ನಮ್ಮನೆ ಹಬ್ಬಕ್ಕೆ ಚಾಲನೆ ನೀಡಿದ ಕನ್ನಡತಿ ಖ್ಯಾತಿಯ ನಟಿ, ಲೇಖಕಿ ರಂಜನಿ ರಾಘವನ್ ಮಾತನಾಡಿ, ನಮ್ಮ ಸುತ್ತಲಿನ ವಾತಾವರಣದ ಕಾರಣದಿಂದ ನಾವು ನಮ್ಮ ಮೂಲವನ್ನು ಮರೆಯುತ್ತಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಸಂಸ್ಕೃತಿ, ಭಾಷೆ, ನಂಬಿಕೆ ಬಿಡಬಾರದು. ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕು. ಆದರೆ, ಇನ್ನಾವುದೋ ಸರಿ ಎಂದು ನಮ್ಮ ಮೂಲ ಮರೆಯುವುದು ಸರಿಯಲ್ಲ. ಮನೆಯಂಗಳದಲ್ಲಿ ನಡೆಯುವ ಇಂತಹ ಸಂಸ್ಕೃತಿಯುಕ್ತ ಕಾರ್ಯಕ್ರಮ ನಮ್ಮ ಮೂಲತನವನ್ನು ನೆನಪಿಸುತ್ತದೆ. ಮುಂದಿನ ಪೀಳಿಗೆಗೆ ಇದರ ಕೊಡುಗೆ ದೊಡ್ಡದಿದೆ. ಕಲಿಯೋದೂ ಇದೆ ಎಂದು ಬಣ್ಣಿಸಿ, ನನ್ನ ಕಥಾ ಡಬ್ಬಿ. ಪುಸ್ತಕಗಳನ್ನೂ ಇಲ್ಲಿ ತಂದು ಹಸ್ತಾಕ್ಷರ ಹಾಕಿಸಿಕೊಂಡಿದ್ದು ಖುಷಿ ತಂದಿದೆ ಎಂದೂ ಹೇಳಿದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ವೀರಲೋಕ ಪ್ರಕಾಶನ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ ಮಾತನಾಡಿ, ಕನ್ನಡ ಅಳಿತು ಹೋಗುತ್ತಿದೆ ಎಂದು ಅಲವತ್ತುಕೊಳ್ಳುವ ಸಂದರ್ಭವೇ ಹೆಚ್ಚು. ಕನ್ನಡಕ್ಕೆ ಬೆಲೆಯಿಲ್ಲ, ಮಾನ್ಯತೆಯಿಲ್ಲ, ಅನ್ನದ ಭಾಷೆಯಲ್ಲ ಎಂಬ ಕೀಳರಿಮೆ, ಭ್ರಮೆ ಬಿಡಬೇಕು. ಮಾತೃ ಭಾಷೆಯ ಬಗ್ಗೆ ನಿರಾಶಾದಿಗಳಾಗಬಾರದು. ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆಯಬೇಕು. ಕನ್ನಡ ಪರ ನೆಲಗಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗುತ್ತಿವೆ. ಭಾಷೆಯ ಮೂಲಕ ಇನ್ನಷ್ಟು ಅದ್ಭುತಗಳನ್ನು ಸಾಧಿಸಬಹುದು. ಮೊದಲು ಸಾವಿರ ಪುಸ್ತಕ ಬಂದಿದ್ದರೆ ದೊಡ್ಡ ವಿಷಯ. ಕಳೆದ ವರ್ಷ ೭೮೦೦ಕ್ಕೂ ಅಧಿಕ ಪುಸ್ತಕ ಬಂದಿದೆ. ಕನ್ನಡ ವಾಹಿನಿಗಳು, ಆಕಾಶವಾಣಿಗಳೂ ಹೆಚ್ಚಾಗಿವೆ. ಕನ್ನಡದ ನೆಲಗಟ್ಟಿನಲ್ಲಿ ದೊಡ್ಡ ದೊಡ್ಡ ಕೆಲಸ ಆಗುತ್ತಿದೆ. ಭಾಷೆಯ ಮೂಲಕ ಮಾತ್ರ ಅಧ್ಬುತವಾಗಿ ಏನಾದರೂ ಕಟ್ಟಲು ಸಾಧ್ಯವಿದೆ ಎಂದರು.
ನಮ್ಮನೆ ಹಬ್ಬದ ಪ್ರಶಸ್ತಿ ಪುರಸ್ಕೃತರ ಪರವಾಗಿ ಅಕ್ಕಿ ಡಾಕ್ಟರ್ ಶಶಿಕುಮಾರ ತಿಮ್ಮಯ್ಯ, ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ, ಸಿದ್ಧಿಶಕ್ತಿಗಳು ಇದ್ದಾಗ ಮಾತ್ರ ದೈವಿಶಕ್ತಿ ಬರಲು ಸಾಧ್ಯ. ಪಂಚಶಕ್ತಿ ಇದ್ದಾಗ ಮಾತ್ರ ಪಂಚಪ್ರಜ್ಞೆ ಬೆಳೆಯಲು ಸಾಧ್ಯವಾಗುತ್ತದೆ. ಆಗ ವಯಕ್ತಿಕ, ಕೌಟುಂಬಿಕ, ಸಾಮಾಜಿಕ, ಸಾಮುದಾಯಿಕ ಹಾಗೂ ರಾಷ್ಟ್ರಪ್ರೇಮದ ಪ್ರಜ್ಞೆ ಬೆಳೆಯುತ್ತದೆ ಎಂದು ಹೇಳಿದರು.
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ನಮ್ಮನೆ ಅಂಗಳದಲ್ಲಿ ನಡೆಯುವ ಹಬ್ಬ ನಮಗೆ ಕೊಟ್ಟಿರುವ ಸಂಸ್ಕೃತಿಯ ಅನಾವರಣದ ಧ್ಯೋತಕ. ನಮ್ಮನೆ ಅಂದರೆ ನಮ್ಮ ಮಾನ ಹಾಗೂ ಮರ್ಯಾದೆಯ ಸತ್ ಅರ್ಥ. ಇಂತಹ ಹಬ್ಬಗಳಿಗೆ ಬೆಂಬಲಿಸುವ ಹಂಬಲ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ನಮ್ಮನೆಯ ಅಂಗಳದಲ್ಲಿ ನಡೆಯುವ ಸಂಸ್ಕೃತಿ, ಕಲೆಯನ್ನು ಬೆಳೆಗಿಸುವ ಕಾರ್ಯಕ್ರಮಗಳು ಪ್ರತಿ ಮನೆಯಲ್ಲೂ ಆಚರಿಸುವಂತಾಗಬೇಕು. ಇದು ಎಲ್ಲೆಡೆ ಪಸರಿಸುವುದೇ ಟ್ರಸ್ಟ್‌ನ ಆಶಯವಾಗಿದೆ ಎಂದರು.
ಮಹೇಶ ಹೆಗಡೆ ಪ್ರಾರ್ಥಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ ಹೆಗಡೆ ಹಳೆಕಾನಗೋಡ, ತುಳಸಿ ಹೆಗಡೆ, ಗುರುಪ್ರಸಾದ ಹೆಗಡೆ ಸಮ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ವಂದಿಸಿದರು. ನಾರಾಯಣ ಭಾಗ್ವತ ನಿರ್ವಹಿಸಿದರು.
ನಮ್ಮನೆ ಹಬ್ಬವು ಹಬ್ಬಬೇಕು. ಮನಸ್ಸು ಉಬ್ಬಬೇಕು. ಬಂಧು ಬಾಂಧವರನ್ನು ತಬ್ಬಬೇಕು. ನಗರದ ಬದುಕಿಗಿಂತ ಗ್ರಾಮೀಣ ಬದುಕಿನಲ್ಲೇ ಮನೆಗಳ, ಮನಗಳ ಬಾಗಿಲು ತೆರೆದಿವೆ.
– ಹಿರೇಮಗಳೂರು ಕಣ್ಣನ್ (ವಾಗ್ಮಿ)
ಇನ್ಸುರೆನ್ಸ್ ಬೇಕಾ? ಸಾಲ ಬೇಕಾ? ಎಂದು ಫೋನ್ ಬರುತ್ತವೆ. ಆದರೆ ಎಂದೂ ಕನ್ನಡ ಪುಸ್ತಕ ಬೇಕಾ ಎಂಬ ಫೋನ್ ಬರೋದಿಲ್ಲ. ಇದಕ್ಕಾಗಿ ಕನ್ನಡ ಪುಸ್ತಕಕ್ಕೆ ಕಾಲ್ ಸೆಂಟರ್ ಆರಂಭಿಸಿದ್ದೇವೆ. ಎಂಟು ಲಕ್ಷ ಓದುಗರನ್ನು ಸಂಪರ್ಕಿಸುತ್ತಿದ್ದೇವೆ. ಯಾವುದೇ ಪುಸ್ತಕ ಬೇಕಾ?ಯಾವುದೇ ಪುಸ್ತಕ ತಲುಪಿಸುತ್ತೇವೆ ಎಂಬ ಅಭಿಯಾನ ಮಾಡುತ್ತಿದ್ದೇವೆ. ನವೆಂಬರ್ ತಿಂಗಳಲ್ಲೇ 6 ಲಕ್ಷಕ್ಕೂ ಅಧಿಕ ಮೊತ್ತದ ಪುಸ್ತಕ ಮಾರಾಟ ಆಗಿದೆ. ಕನ್ನಡ ಪುಸ್ತಕಗಳಿಗೆ ಒಂದು ಬ್ರಾಂಡ್ ಅಂಬಾಸಿಡರ್ ಆಗಬೇಕು ಎಂದು ಕೆಲಸ ಮಾಡುತ್ತಿದ್ದೇವೆ.
– ವೀರಕಪುತ್ರ ಶ್ರೀನಿವಾಸ (ಮುಖ್ಯಸ್ಥರು, ವೀರಲೋಕ ಪ್ರಕಾಶನ)
ಒಬ್ಬಳೇ ೪೦ ನಿಮಿಷ ನಿರಂತರ ಪ್ರದರ್ಶನ ನೀಡುವುದು ಸುಲಭವಲ್ಲ. ಲೀಲಾವತಾರಮ್ ತುಂಬಾ ಚೆನ್ನಾಗಿ ಪ್ರದರ್ಶನ ಕಂಡಿದೆ. ತುಳಸಿ ಬೆಟ್ಟಕೊಪ್ಪಗೂ ನಮ್ಮ ಕಡೆಯಿಂದ ಚಪ್ಪಾಳೆಯ ಅಭಿನಂದನೆಗಳು.
— ರಂಜನಿ ರಾಘವನ್ (ನಟಿ