ಶಿರಸಿ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಲಯನ್ ಪ್ರೊಫೆಸರ್ ಎನ್ವಿಜಿ ಭಟ್ (76) ನಿಧನರಾಗಿದ್ದಾರೆ.
ಶಿರಸಿಯ ಪ್ರೋಗ್ರೆಸ್ಸಿವ್ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತದನಂತರದಲ್ಲಿ ಪ್ರಾಚಾರ್ಯರಾಗಿ,ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಶಿರಸಿಯ ಸರ್ಕಾರಿ ನಿವೃತ್ತ ನೌಕರ ಸಂಘದ ಅಧ್ಯಕ್ಷರಾಗಿ, ಶಿರಸಿ ಪ್ರೋಗ್ರೆಸ್ಸಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
ಶಿರಸಿ ಲಯನ್ಸ್ ಕ್ಲಬ್ ನ ಸದಸ್ಯರಾಗಿ, ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿಯ ವಿವಿಧ ಹುದ್ದೆಗಳಲ್ಲಿ ಹಾಗೂ ಲಯನ್ಸ್ ನ ಪ್ರಾದೇಶಿಕ ಗವರ್ನರ್ ವರೆಗೆ ಹುದ್ದೆಗಳಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಶಿರಸಿಯ ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಶಿಕ್ಷಣ ಸಂಸ್ಥೆಗಳ ಪಾಲಿಗೆ ಅತ್ಯಂತ ಕಷ್ಟ ಕಾಲವಾದ ಕೋವಿಡ್ ಕಾಲದಲ್ಲಿ ಸಮರ್ಥವಾಗಿ ಸಿರ್ಸಿ ಲಯನ್ಸ್ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿದ ಕೀರ್ತಿ ಎನ್ವಿಜಿ ಭಟ್ಟವರಿಗೆ ಸಲ್ಲುತ್ತದೆ.
ಸದಾ ವಿದ್ಯಾರ್ಥಿಗಳ ಶಿಕ್ಷಕರ ಕುರಿತು ಅತ್ಯಂತ ಕಾಳಜಿ ಪೂರಕವಾಗಿ ಸ್ಪಂದಿಸುವ, ಉತ್ತಮ ಮಾನವೀಯ ಗುಣಗಳನ್ನು ಹೊಂದಿ ಸದಾ ಮಾರ್ಗದರ್ಶನ ನೀಡುವ ಮನೋಭಾವದ ಎನ್ವಿಜಿ ಭಟ್ಟರ ಕಾರ್ಯ ಸದಾಸ್ಮರಣೀಯ.
ಶ್ರೀಯುತರು ಕುಮಟಾ ನವಿಲುಗೋಣ ಮೂಲದವರಾಗಿದ್ದು, ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಹಾಗೂ ಶಿಷ್ಯ ವರ್ಗವನ್ನು ಅಗಲಿದ್ದಾರೆ.
ಶ್ರೀಯುತರ ಗೌರವಾರ್ಥ ಶಿರಸಿ ಲಯನ್ಸ್ ಶಾಲಾ ಹಾಗೂ ಕಾಲೇಜು ಸಮೂಹದ ಪ್ರಾಚಾರ್ಯರು, ಶಿಕ್ಷಕ ಶಿಕ್ಷಕೇತರ ಬಳಗ ಹಾಗೂ ವಿದ್ಯಾರ್ಥಿ ವೃಂದ ಮೌನವನ್ನು ಆಚರಿಸಿ ತಮ್ಮ ಶ್ರದ್ಧಾಂಜಲಿಗಳನ್ನ ಸಲ್ಲಿಸಿತು.